

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳನ್ನು ಜಯಿಸಿದ ಚಾಂಪಿಯನ್ಸ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರೀ ನಗದು ಬಹುಮಾನವನ್ನು ಘೋಷಣೆ ಮಾಡಿದ್ದಾರೆ.
ಭಾರತದ ಸಶಸ್ತ್ರ ಪಡೆಗಳ ಏಷ್ಯನ್ ಗೇಮ್ಸ್ ಪದಕ ವಿಜೇತರ ಜತೆ ಇಂದು ಸಂವಾದ ನಡೆಸುವಾಗ ರಾಜನಾಥ್ ಸಿಂಗ್ ಘೋಷಣೆ ಮಾಡಿದರು. ಅದರ ಪ್ರಕಾರ ಚಿನ್ನದ ಪದಕ ಜಯಿಸಿದವರಿಗೆ 25 ಲಕ್ಷ ರೂಪಾಯಿ, ಬೆಳ್ಳಿ ಪದಕಕ್ಕೆ 15 ಲಕ್ಷ ಮತ್ತು ಕಂಚಿನ ಪದಕ ಜಯಿಸಿದವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ.
ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟು 107 ಪದಕಗಳನ್ನು ಗೆದ್ದಿದ್ದೇವೆ. ಕಳೆದ ಬಾರಿ ಅಂದರೆ, 2018ರ ಏಷ್ಯನ್ ಗೇಮ್ಸ್ ನಲ್ಲಿ 70 ಪದಕಗಳನ್ನು ಗೆದ್ದಿದ್ದೆವು. 70 ಪದಕಗಳಿಂದ 107 ಪದಕಗಳವರೆಗಿನ ಬೆಳವಣಿಗೆಯನ್ನು ಗಮನಿಸಿದರೆ, ಸುಮಾರು 50% ರಷ್ಟು ಏರಿಕೆ ಕಂಡಿದೆ. ಭಾರತವು ಚಂದ್ರನನ್ನೂ ತಲುಪಿದೆ. ವಿಶ್ವದ ದೊಡ್ಡ ದೊಡ್ಡ ಸಂಸ್ಥೆಗಳು ಭಾರತದ ಅಭಿವೃದ್ಧಿಯನ್ನು ಒಪ್ಪಿಕೊಳ್ಳುತ್ತಿವೆ. ಅದು ವಿಶ್ವ ಬ್ಯಾಂಕ್ ಅಥವಾ ಅಂತಾರಾಷ್ಟ್ರೀಯ ಹಣಕಾಸು ನಿಧಿಯೇ ಆಗಿರಲಿ, ಭಾರತದ ಅಭಿವೃದ್ಧಿ ಪಯಣವು ಎಲ್ಲೆಡೆ ಚರ್ಚೆಯಾಗುತ್ತಿದೆ ಎಂದು ರಾಜನಾಥ್ ಸಿಂಗ್ ಹೆಮ್ಮೆಯ ಮಾತುಗಳನ್ನಾಡಿದರು.
ಈ ಬಾರಿ ಏಷ್ಯನ್ ಗೇಮ್ಸ್‌ಗೆ ಅಬ್ ಕಿ ಬಾರ್, ಸೌ ಪಾರ್’ (ಈ ಬಾರಿ ನೂರರ ಆಚೆ) ಎಂಬ ಘೋಷಣೆ ನಮ್ಮದಾಗಿತ್ತು. ನೀವು 140 ಕೋಟಿ ಭಾರತೀಯರ ಆಕಾಂಕ್ಷೆಗಳ ಮೇಲೆ ಕೆಲಸ ಮಾಡುವ ಮೂಲಕ ನಮ್ಮ ಕನಸನ್ನು ನನಸಾಗಿಸಿದ್ದೀರಿ ಮತ್ತು ಇಂದು ಭಾರತವು ಅತ್ಯುತ್ತಮ ಕೊಡುಗೆಯನ್ನು ನೀಡಿದ್ದು, ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ 107 ಪದಕಗಳನ್ನು ತಂದಿದೆ ಎಂದರು.