More

    ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭ; ಸಚಿವ ಎಂ.ಬಿ. ಪಾಟೀಲ

    ವಿಜಯಪುರ: ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವಾಗಲಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.

    ಈ ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕವಾಗಿದ್ದಾಗಲೇ ನಮಗೆ ಸಾಕಷ್ಟು ಅನುಕೂಲವಾಗಿದೆ. ಕಾಂಗ್ರೆಸ್ ಯಾರನ್ನೂ ಅವಲಂಬಿಸಿಲ್ಲ. ನಮ್ಮ ಪಕ್ಷ ಜನರ ಮೇಲೆ ಅವಲಂಬಿತವಾಗಿದೆ. ಜನರು ಆಶೀರ್ವಾದ ಮಾಡಿದರೆ ಲೋಕಸಭೆಯಲ್ಲಿ ಆಯ್ಕೆಯಾಗಿ ಬರುತ್ತೇವೆ ಎಂದು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

    ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಐಎನ್‌ಡಿಐಎ ಒಕ್ಕೂಟಕ್ಕೆ ಬೆಂಬಲ ನೀಡುವುದಾಗಿ ಹೇಳಿರುವುದು ಅವರ ವೈಯಕ್ತಿಕ ನಿರ್ಧಾರ. ಅವರ ಪಕ್ಷದ ಆಂತರಿಕ ವಿಚಾರ. ಸಿ.ಎಂ ಇಬ್ರಾಹಿಂ ಜಾತ್ಯತೀತ ಜನತಾದಳದ ಜಾತ್ಯತೀತತೆ ಕಾಪಾಡಲು ನಿರ್ಣಯ ತೆಗೆದುಕೊಂಡಂತೆ ಕಾಣುತ್ತದೆ. ಸಿಎಂ ಇಬ್ರಾಹಿಂ ಅಧ್ಯಕ್ಷತೆಯ ಜಾತ್ಯತೀತ ಜನತಾದಳ ಅಧಿಕೃತವೋ, ಇನ್ನೊಂದು ಅಧಿಕೃತವೋ ನೋಡಬೇಕು. ಸಿಎಂ ಇಬ್ರಾಹಿಂ ಬುದ್ದಿವಂತರಿದ್ದಾರೆ. ಅವರ ಪಕ್ಷದ ಬಗ್ಗೆ ನಾನೇನು ಹೇಳಲಿ ಎಂದು ಪ್ರಶ್ನಿಸಿದರು.

    ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಹಣ ಒಯ್ಯಲು ರಾಜ್ಯಕ್ಕೆ ಬರುತ್ತಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ, ವೇಣುಗೋಪಾಲರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ, ಅವರು ಪ್ರಾಮಾಣಿಕ. ಸುಮ್ಮಸುಮ್ಮನೆ ಅವರ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದರು.

    ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾವೇಶ ಶಕ್ತಿ ಪ್ರದರ್ಶನವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮಾವೇಶ ಮಾಡಿದಾಕ್ಷಣ ಶಕ್ತಿ ಪ್ರದರ್ಶನವಾ? ಎಂದರಲ್ಲದೇ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜಕೀಯೇತರ ಸಂಘಟನೆಯಾಗಿದೆ. ಮಹಾಸಭಾದಲ್ಲಿ ಶಿವಶಂಕರಪ್ಪ, ಈಶ್ವರ ಖಂಡ್ರೆ, ವಿನಯ ಕುಲಕರ್ಣಿ ಪ್ರಭಾಕರ ಕೋರೆ, ಚರಂತಿಮಠ ಸೇರಿದಂತೆ ಎಲ್ಲ ಪಕ್ಷದ ಹಲವರಿದ್ದಾರೆ. ಅದೊಂದು ಪಕ್ಷಾತೀತರ ಸಂಘಟನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts