More

    ಡಿಸಿ, ಎಸಿ, ತಹಶೀಲ್ದಾರ್ ಸುಸ್ತೋಸುಸ್ತು; 316 ಅಧಿಕಾರಿಗಳ ಮುಂದಿದೆ ಲಕ್ಷದಷ್ಟು ವ್ಯಾಜ್ಯ

    ಬೆಂಗಳೂರು: ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರ ಮತ್ತು ಜನರ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುವ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಮೇಲೆ ಕಾರ್ಯಭಾರ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಅವರಿಗಿರುವ ವಿಶೇಷ ಅಧಿಕಾರವಾದ ಅರೆಕಾಲಿಕ ನ್ಯಾಯಾಲಯದ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
    ಸರ್ಕಾರದ ಬಳಿ ಇರುವ ಅಂಕಿ ಅಂಶಗಳ ಪ್ರಕಾರ ಈ ಮೂರು ಹಂತದ ಅಧಿಕಾರಿಗಳ ಮುಂದಿನ ಕಡತರಾಶಿ ಬೆಟ್ಟದಂತೆ ಬೆಳೆಯುತ್ತಲೇ ಇದೆ.
    ಅನ್ಯ ಕಾರ್ಯಗಳು, ಜವಾಬ್ದಾರಿಗಳು ಹೆಚ್ಚಾಗುತ್ತಿರುವುದರಿಂದ ಕಾರ್ಯದೊತ್ತಡದ ನಡುವೆ ನಿರಂತರ ಕೋರ್ಟ್ ನಡೆಸಲು ಸಾಧ್ಯವಾಗದೇ ಸುಸ್ತು ಹೊಡೆಯುತ್ತಿದ್ದಾರೆ. ಸರ್ಕಾರ ವಿಶೇಷ ಆಂದೋಲನ ರೀತಿ ಚಟುವಟಿಕೆ ನಡೆಸದೇ ಹೋದರೆ ಅಥವಾ ಪ್ರತ್ಯೇಕ ವ್ಯವಸ್ಥೆ ರೂಪಿಸದೇ ಹೋದಲ್ಲಿ ಈ ಮೂರು ಹಂತದ ಅಧಿಕಾರಿಗಳು ದೈಹಿಕವಾಗಿ, ಮಾನಸಿಕವಾಗಿ ನಜ್ಜುಗುಜ್ಜಾಗುವುದು ಖಂಡಿತ ಎಂಬ ಸ್ಥಿತಿ ಇದೆ. ಅಲ್ಲದೇ ಬೇರೆ ಜನಸ್ನೇಹಿ ಕಾರ್ಯನಿರ್ವಹಣೆಯೂ ಕಷ್ಟವಾಗಲಿದೆ.

    ಡಿಸಿಗಳು ಸುಸ್ತು

    ವಿಶೇಷ ಜಿಲ್ಲಾಧಿಕಾರಿಗಳು ಸೇರಿದಂತೆ ರಾಜ್ಯದಲ್ಲಿ 39 ಮಂದಿ ಡಿಸಿಗಳಿದ್ದಾರೆ. ಇವರ ಮುಂದೆ ಆಗಸ್ಟ್ ಅಂತ್ಯಕ್ಕೆ 14415 ಪ್ರಕರಣಗಳು ವಿಚಾರಣೆಯಲ್ಲಿವೆ. ಡಿಸಿಗಳು ಪ್ರತಿ ತಿಂಗಳು ಸರಾಸರಿ 600-650 ಪ್ರಕರಣ ವಿಲೇವಾರಿ ಮಾಡಲಷ್ಟೇ ಶಕ್ತರು. ಅಲ್ಲದೇ ಪ್ರತಿ ತಿಂಗಳೂ ಒಟ್ಟಾರೆ 450-500 ಪ್ರಕರಣಗಳು ಹೊಸದಾಗಿ ಸೇರ್ಪಡೆಯಾಗುವ ಕಾರಣ ವಿಲೇವಾರಿಗೆ ವೇಗವೂ ಸಿಗುತ್ತಿಲ್ಲವಾಗಿದೆ.

    ಎಸಿ ಮೇಲೆ ಮಣಭಾರ

    ರಾಜ್ಯದಲ್ಲಿ 53 ಉಪವಿಭಾಗಾಧಿಕಾರಿಗಳಿದ್ದು ಅವರ ಮುಂದೆ ಬರೋಬ್ಬರಿ 60 ಸಾವಿರ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಮಾಸಿಕ ಸರಾಸರಿ 4 ಸಾವಿರ ಪ್ರಕರಣ ಬಗೆಹರಿಸಲು ಮಾತ್ರ ಸಾಧ್ಯವಾಗುತ್ತಿದೆ.
    ಉಪ ವಿಭಾಗಾಧಿಕಾರಿ ಕೋರ್ಟ್ ಮುಂದೆ ದೊಡ್ಡ ಪ್ರಮಾಣದ ಪ್ರಕರಣಗಳು ಬಗೆಹರಿಯದೇ ಉಳಿದಿರುವ ಅಂಕೆ ಸಂಖ್ಯೆ ಗಮನಿಸುವುದಾದರೆ, ಆಗಸ್ಟ್ ಆರಂಭದಲ್ಲಿ 59719 ಪ್ರಕರಣಗಳಿದ್ದು, ಹೊಸದಾಗಿ 4447 ಪ್ರಕರಣ ಸೇರ್ಪಡೆಗೊಂಡಂತೆ ಒಟ್ಟು 64,166 ಪ್ರಕರಣಕ್ಕೆ ವಿಸ್ತರಣೆಯಾಗಿದೆ. ಅಕ್ಟೋಬರ್ ಆರಂಭದಲ್ಲಿ ಇದು 61137 ಸಂಖ್ಯೆಗೆ ಕುಗ್ಗಿದೆಯಾದರೂ ವಿಲೇವಾರಿ ಪ್ರಮಾಣಕ್ಕೆ ಹೋಲಿಸಿದರೆ ಬಾಕಿ ಪ್ರಕರಣದ ಸಂಖ್ಯೆ ಬೆಳೆಯುತ್ತಿದೆ.

    ತಹಶೀಲ್ದಾರ್‌ಗೆ ಬಲು ಕಷ್ಟ

    ತಹಶೀಲ್ದಾರ್ ನ್ಯಾಯಾಲಯದಲ್ಲಿ ದೀರ್ಘಕಾಲಿನ ಅವಧಿಯಲ್ಲಿ ಸಾಕಷ್ಟು ಪ್ರಕರಣ ಉಳಿದಿದೆ. ರಾಜ್ಯದಲ್ಲಿ 236 ತಾಲೂಕುಗಳಿದ್ದು, 224 ಮಂದಿ ತಹಶೀಲ್ದಾರರಿದ್ದಾರೆ. ಒಟ್ಟಾರೆ, 15527 ಪ್ರಕರಣಗಳನ್ನು ಪರಿಹರಿಸಬೇಕಾದ ಸವಾಲು 224 ತಹಶೀಲ್ದಾರರ ಮುಂದಿದೆ.
    ತಹಶೀಲ್ದಾರ್ ಮುಂದಿರುವ ವಿವಾದಾಸ್ಪದ ಮ್ಯುಟೇಷನ್ ಪ್ರಕರಣಗಳು 17,719 ಇದೆ. ಆಗಸ್ಟ್ ಆರಂಭದಲ್ಲಿ 22,487 ಪ್ರಕರಣ ಬಾಕಿ ಇದ್ದು, ಹೊಸದಾಗಿ 4601 ಸೇರ್ಪಡೆಯಾಗಿತ್ತು. ಇಡೀ ತಿಂಗಳಲ್ಲಿ 9369 ಪ್ರಕರಣ ವಿಲೇವಾರಿ ಮಾಡಲಾಗಿದೆ. ಮಾಸಿಕ ಸರಾಸರಿ ಐದೂವರೆ ಸಾವಿರದಷ್ಟು ಸಾಧ್ಯವಾಗುತ್ತಿದೆ. ವಿಪತ್ತು ನಿರ್ವಹಣೆ ಅಥವಾ ಅನಿವಾರ್ಯ ಕಾರ್ಯದೊತ್ತಡ ಬಂದಾಗ ವಿಲೇವಾರಿ ಕುಂಠಿತವಾಗುವುದು ಸಹಜವಾಗಿದೆ. ಹೆಚ್ಚೆಚ್ಚು ಪ್ರಕರಣ ಬಾಕಿ ಇರುವುದು ಬೆಂಗಳೂರು (2010), ರಾಯಚೂರು (1560), ಬೆಳಗಾವಿ (1368), ಮಂಡ್ಯ (1271), ಮೈಸೂರು (1131) ಜಿಲ್ಲೆಗಳಲ್ಲಿ.
    ವಿವಾದಾಸ್ಪದ ಮ್ಯುಟೇಷನ್ ಪ್ರಕರಣ ಪರಿಹಾರ ಅಷ್ಟು ಸಲೀಸಲ್ಲದ ಕೆಲಸ. ಅನೇಕ ಪ್ರಕರಣಗಳಲ್ಲಿ ಸ್ಥಳಕ್ಕೆ ಭೇಟಿ ನೀಡುವ ಅನಿವಾರ್ಯತೆ ಹೆಚ್ಚಿರುತ್ತದೆ. ಅಲ್ಲದೇ ಇನ್ನು ಕೆಲವು ಪ್ರಕರಣಗಳಲ್ಲಿ ಕೆಳಹಂತದ ಸಿಬ್ಬಂದಿ ಮಾಡುವ ತಪ್ಪನ್ನು ತಹಶೀಲ್ದಾರ್ ಸರಿಪಡಿಸಲು ಭಗೀರಥ ಪ್ರಯತ್ನವನ್ನೇ ಮಾಡಬೇಕಾಗುತ್ತದೆ.

    ಸವಾಲು ಹತ್ತಾರು, ತಾಪತ್ರಯ ನೂರೆಂಟು
    • ಪ್ರಕೃತಿ ವಿಕೋಪ ನಿರ್ವಹಣೆ, ಕರಗದ ಕಂದಾಯ ಇಲಾಖೆಯ ಸಮಸ್ಯೆಗಳು, ಸಾಮಾಜಿಕ ಭದ್ರತಾ ಯೋಜನೆ ಜಾರಿ, ಜನಪ್ರತಿನಿಧಿಗಳು ಆಗಾಗ್ಗೆ ಕರೆಯುವ ಸಭೆಗಳು, ಸರ್ಕಾರಿ ಕಾರ್ಯಕ್ರಮಗಳು, ಜಯಂತಿ ಆಚರಣೆಗಳ ನಡುವೆ ಅಭಿವೃದ್ಧಿ ಚಟುವಟಿಕೆಗಳಿಗೆ ಗಮನ ಕೊಡುವುದೇ ಈ ಮೂರು ಹಂತದ ಅಧಿಕಾರಿಗಳಿಗೆ ತ್ರಾಸವಾಗಿದೆ. ಇನ್ನು ಕೋರ್ಟ್ ನಡೆಸುವುದಕ್ಕೆ ಸಮಯವೇ ಸಿಗುತ್ತಿಲ್ಲ. ಅಲ್ಲದೇ ಅಷ್ಟು ಸಲೀಸಾಗಿ ಟಾಟ್ ಮುಗಿಸುವ ಕೆಲಸವೂ ಅದಲ್ಲ. ಹೀಗಾಗಿ ವರ್ಷದಿಂದ ವರ್ಷದಲ್ಲಿ ಮೂರು ಹಂತದ ವ್ಯವಸ್ಥೆಯ ಜವಾಬ್ದಾರಿ ಹೊಂದಿದವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದರು.

      ಮುಖ್ಯ ಸಂಗತಿ
      1. ತಹಶೀಲ್ದಾರ್ ಕೋರ್ಟ್‌ನಲ್ಲಿ ಆರು ತಿಂಗಳಿಂದ ಒಂದು ವರ್ಷ ಅವಧಿಯ 3530, ಒಂದು ವರ್ಷದಿಂದ 2 ವರ್ಷ ಅವಧಿದ್ದು 1273 ಇವೆ.
      2. ಎಸಿ ಕೋರ್ಟ್ ಮುಂದೆ ಐದು ವರ್ಷಕ್ಕಿಂತ ಹಳೆಯದಾದ ಪ್ರಕರಣಗಳು- 15,967, 2ರಿಂದ ಐದು ವರ್ಷದವು 13,433 ಪ್ರಕರಣಗಳು.
      3. ಡಿಸಿ ಕೋರ್ಟ್ ಮುಂದೆ ಇರುವ 14415 ಪ್ರಕರಣಗಳಲ್ಲಿ ಐದು ವರ್ಷಕ್ಕಿಂತ ಮೇಲ್ಪಟ್ಟವು 4628, ಎರಡರಿಂದ ಐದು ವರ್ಷದವು 2487 ಪ್ರಕರಣಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts