

ಬಾಲಿವುಡ್ನ ಬೇಡಿಕೆ ನಟಿ ದೀಪಿಕಾ ಪಡುಕೋಣೆ ನಟನೆಯ ಸಿನಿಮಾ ಬಂದು ಸರಿಸುಮಾರು ಎರಡು ವರ್ಷವೇ ಕಳೆದಿವೆ. 2020ರ ಜನವರಿಯಲ್ಲಿ ಬಂದ ‘ಚಪಾಕ್’ ಅವರ ಕೊನೇ ಚಿತ್ರ. ಅದಾದ ಬಳಿಕ ಒಂದಿಲ್ಲೊಂದು ಚಿತ್ರದ ಶೂಟಿಂಗ್ನಲ್ಲಿ ಅವರ ಹೆಸರು ಕೇಳಿಸಿದ್ದೇ ಹೆಚ್ಚು. ಇದೀಗ ಕೊನೆಗೂ ಅವರ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ಹಾಗಂತ ಬೆಳ್ಳಿತೆರೆಗೆ ದೀಪಿಕಾ ಆಗಮಿಸುತ್ತಿಲ್ಲ. ಬದಲಿಗೆ ‘ಗೆಹ್ರಾಯಿಯಾಂ’ ಚಿತ್ರದ ಮೂಲಕ ಒಟಿಟಿಯಲ್ಲಿ ಅವರ ದರ್ಶನವಾಗಲಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇದೇ ವರ್ಷದ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಆಗಬೇಕಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟು, ಇದೀಗ ನೇರವಾಗಿ ಅಮೆಜಾನ್ ಪ್ರೖೆಂನಲ್ಲಿ ಜ. 25ಕ್ಕೆ ಸ್ಟ್ರೀಮ್ ಆಗಲಿದೆ. ಶಕುನ್ ಬಾತ್ರಾ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ದೀಪಿಕಾ ಜತೆಗೆ ಸಿದ್ಧಾಂತ್ ಚತುರ್ವೆದಿ, ಅನನ್ಯಾ ಪಾಂಡೆ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರಸ್ತುತ ಯಾಂತ್ರಿಕ ಬದುಕಿನ ಸಂಬಂಧಗಳ ‘ಆಳ’ದ ಕಥೆಯನ್ನು ಚಿತ್ರ ಹೊಂದಿದೆಯಂತೆ. ಧರ್ಮ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಸಂಸ್ಥೆ ಒಟ್ಟಾಗಿ ಚಿತ್ರ ನಿರ್ವಿುಸಿವೆ.
ಇನ್ನೇನು ಇದೇ ವಾರ ರಣವೀರ್ ಸಿಂಗ್ ನಟನೆಯ ‘83’ ಚಿತ್ರ ಬಿಡುಗಡೆ ಆಗುತ್ತಿದ್ದು, ಅತಿಥಿ ಪಾತ್ರವೊಂದರಲ್ಲಿಯೂ ದೀಪಿಕಾ ನಟಿಸಿದ್ದಾರೆ. ಪ್ರಭಾಸ್ ಜತೆಗಿನ ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರದ ಶೂಟಿಂಗ್ನಲ್ಲಿಯೂ ಭಾಗವಹಿಸಿದ್ದಾರೆ. ಶಾರುಖ್ ಖಾನ್ ‘ಪಠಾಣ್’, ಹೃತಿಕ್ ರೋಷನ್ ‘ಫೈಟರ್’ ಚಿತ್ರದಲ್ಲಿಯೂ ದೀಪಿಕಾ ನಟಿಸುತ್ತಿದ್ದಾರೆ. -ಏಜೆನ್ಸೀಸ್