

ದೀಪಿಕಾ ಪಡುಕೋಣೆ ಅಭಿನಯದ ‘ಚಪಾಕ್’ ಚಿತ್ರದಲ್ಲಿ ಹಲವು ಆಸಿಡ್ ದಾಳಿಯ ಸಂತ್ರಸ್ತೆಯರು ಅಭಿನಯಿಸಿದ್ದರು. ಆ ಪೈಕಿ ಉತ್ತರಪ್ರದೇಶದ ಬೈನೋರ್ರ ಬಾಲಾ ಪ್ರಜಾಪತಿ ಸಹ ಒಬ್ಬರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಾಲಾ ನೆರವಿಗೆ ಇದೀಗ ದೀಪಿಕಾ ಬಂದಿದ್ದು, 15 ಲಕ್ಷ ರೂ.ಗಳ ನೆರವನ್ನು ಘೋಷಿಸಿದ್ದಾರೆ.
ಬಾಲಾ ಪ್ರಜಾಪತಿ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ, ಅನಾರೋಗ್ಯ ಸಮಸ್ಯೆ ಉಲ್ಬಣಗೊಂಡಿದ್ದು, ಅವರನ್ನು ನವದೆಹಲಿಯ ಸಫ್ದಾರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಾಗೆ ಕಿಡ್ನಿ ಕಸಿ ಮಾಡುವ ಅವಶ್ಯಕತೆ ಎದುರಾಗಿದೆ. ಈ ನಿಟ್ಟಿನಲ್ಲಿ ಚಾನ್ವ ಫೌಂಡೇಶನ್, ‘ಸೇವ್ ಬಾಲಾ’ ಎಂಬ ಅಭಿಯಾನ ಶುರು ಮಾಡಿದೆ. ಕೈಲಾದಷ್ಟು ಸಹಾಯ ಮಾಡಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಸಲ್ಲಿಸಿದೆ. ದೀಪಿಕಾಗೆ ಈ ವಿಷಯ ಗೊತ್ತಾಗಿದ್ದೇ ತಡ, 15 ಲಕ್ಷ ರೂ.ಗಳ ನೆರವಿನ ಹಸ್ತ ಚಾಚಿದ್ದಾರೆ.