

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಏಪ್ರಿಲ್ ತಿಂಗಳ ಒಳಗೆ ಚುನಾವಣೆ ಮೂಲಕ ನಡೆಸುವ ನಿರ್ಧಾರ(Decision to elect new state president of JDS through election) ವನ್ನು ಜೆಡಿಎಸ್ ಕೈಗೊಂಡಿದೆ. ಜೆ.ಪಿ.ಭವನದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ನಡೆದ ಜೆಡಿಎಸ್ ಮಹತ್ವದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದು ಹೇಳಿದರು.
ಪಕ್ಷದ ದ್ವೈವಾರ್ಷಿಕ ಸಾಂಸ್ಥಿಕ ಚುನಾವಣೆ, ಸದಸ್ಯತ್ವ ಅಭಿಯಾನ ಚುರುಕುಗೊಳಿಸುವುದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ತಯಾರಿ ಹಾಗೂ ಪಕ್ಷ ಸಂಘಟನೆ ವಿಷಯಗಳ ಕುರಿತು ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಪಕ್ಷದ ಸಂಘಟನೆ ಬಗ್ಗೆ ಪಕ್ಷದ ನಾಯಕರಿಗೆ ಕಠಿಣವಾಗಿಯೇ ಹೇಳಿದ್ದೇನೆ. ಯಾರು ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಗೆ ದುಡಿಯುತ್ತಾರೋ ಅಂಥವರಿಗೆ ಆದ್ಯತೆ ಕೊಡುತ್ತೇವೆ. ನಾನು ಕೂಡ ಪಕ್ಷ ಸಂಘಟನೆಯಲ್ಲಿ ನಿಯಮಿತವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಾರದಲ್ಲಿ ನಾಲ್ಕು ದಿನ ನವದೆಹಲಿಯ ಸಚಿವಾಲಯದಲ್ಲಿ ಕೆಲಸ ಮಾಡುತ್ತೇನೆ. ಒಂದು ಅಥವಾ ಎರಡು ದಿನ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಕಾರ್ಖಾನೆಗಳಿಗೆ ಭೇಟಿ ಕೊಡುತ್ತೇನೆ. ಉಳಿದ ಸಮಯವನ್ನು ಪಕ್ಷದ ಕೆಲಸಕ್ಕೆ ಮಿಸಲಿಡುತ್ತೇನೆ. ಪಕ್ಷದ ಸಂಘಟನೆ, ಸಭೆ, ಪ್ರವಾಸ, ಮಂಡ್ಯ ಕ್ಷೇತ್ರಕ್ಕೆ ಭೇಟಿ ಇತ್ಯಾದಿಗಳ ಬಗ್ಗೆ ವೇಳಾಪಟ್ಟಿ ಸಿದ್ಧ ಮಾಡಿಕೊಂಡಿದ್ದೇನೆ. ಇನ್ನು ಮುಂದೆ ಅದರಂತೆಯೇ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಂಕ್ರಾಂತಿ ನಂತರ ಜೆಡಿಎಸ್ ಇರುವುದೇ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸಚಿವರೇ, ಮೊದಲು ನಿಮ್ಮ ಪಕ್ಷದ ಕಥೆ ನೋಡಿಕೊಳ್ಳಿ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸನ್ನು ದೂರ ಇಟ್ಟು ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದೆ. ಇಂಡಿ ಕೂಟವನ್ನು ವಿಸರ್ಜನೆ ಮಾಡಿ ಎಂದು ಓಮರ್ ಅಬ್ದುಲ್ಲಾ ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಾವು ಏಕಾಂಗಿಯಾಗಿ ಸ್ಥಳಿಯ ಸಂಸ್ಥೆಗಳ ಚುನಾವಣೆ ಎದುರಿಸುತ್ತೇವೆ ಎಂದು ಶಿವಸೇನೆ ಹೇಳುತ್ತಿದೆ. ಅಲ್ಲೆಲ್ಲ ಎಲ್ಲಿದೆ ಕಾಂಗ್ರೆಸ್? ಎಂದು ಟಾಂಗ್ ಕೊಟ್ಟರು.
ಕೇಂದ್ರ ಸರ್ಕಾರವೇ ಜಾತಿ ಗಣತಿಗೆ ತೀರ್ಮಾನ ಮಾಡಿದೆ. ಹೀಗಿದ್ದ ಮೇಲೆ ರಾಜ್ಯ ಸರ್ಕಾರ ಕೇಂದ್ರದ ವರದಿ ಬರುವ ತನಕ ಕಾಯಲಿ. ರಾಜ್ಯದಲ್ಲಿ ಈಗಾಗಲೇ ಆಗಿರುವ ಜಾತಿಗಣತಿ ವರದಿ ದೋಷಪೂರಿತವಾಗಿದೆ. ಗಣತಿ ಆಗಿ ಹತ್ತು ವರ್ಷಗಳು ಮೀರಿದೆ. ರಾಜ್ಯದಲ್ಲಿ ಹಣಕ್ಕೆ ಬರವಿಲ್ಲ. ರಾಜ್ಯ ಸರ್ಕಾರವೇ ಹೊಸದಾಗಿ ಇನ್ನೊಂದು ಜಾತಿ ಜನಗಣತಿ ಮಾಡಲಿ. ಜನರಿಂದ ಹಣವನ್ನು ಯಥೇಚ್ಛವಾಗಿ ಸುಲಿಗೆ ಮಾಡುತ್ತಿದ್ದೀರಿ. ಗಂಜಿ ಕೇಂದ್ರಗಳಿಗಾಗಿ ಬಾಯಿ ಬಿಟ್ಟುಕೊಂಡು ಕಾಯುತ್ತಾ ಕೂತಿರುವರು ಕೆಲವರು ಇರುತ್ತಾರಲ್ಲವೇ.. ಅವರನ್ನೇ ಸೇರಿಸಿ ಇನ್ನೊಂದು ಇನ್ನೊಂದು ಸಮಿತಿ ಮಾಡಿ ಜಾತಿಗಣತಿ ಮಾಡಿ ಎಂದು ಸಿಎಂಗೆ ಕುಮಾರಸ್ವಾಮಿ ಟಾಂಗ್ ಕೊಟ್ಟರು.