

ನಾಗಪುರ: ಆತ 24 ವರ್ಷದ ಯುವಕ. ಸಿಕ್ಕಾಪಟ್ಟೆ ಸಾಲ ಮಾಡಿಕೊಂಡು ಅದರಿಂದ ಹೊರಬರೋದಕ್ಕಾಗದೇ ಒದ್ದಾಡ್ತಿದ್ದ. ಕೈಗೊಂದು ಟಾಯ್ ಗನ್ ಸಿಕ್ಕಿದ್ದೇ ತಡ ಸಾಲದ ಸುಳಿಯಿಂದ ಹೊರ ಬರೋದಕ್ಕೆ ಒಂದು ಉಪಾಯ ಕಂಡುಕೊಂಡ!
ನಾಗಪುರದ ಧರ್ಮಪೀಠ ಪ್ರದೇಶದಲ್ಲಿ ಶನಿವಾರ ನಡೆದ ಘಟನೆ ಇದು. ಯುವಕನ ಹೆಸರು ರೋಶನ್ ಖಂಡೇಕರ್. ಶಾಪಿಂಗ್ ಮಾಲ್ ಬಳಿ ಬಂದಿದ್ದ. ಆಗ ತಾನೆ ಶಾಪಿಂಗ್ ಮುಗಿಸಿ ಹೊರಬಂದ ಸಹೋದರಿಯರು ಕಾರನ್ನೇರಿದ್ದರು. ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ, ಟಾಯ್ ಗನ್ ಹಿಡಿದ ಅದೇ ಕಾರನ್ನೇರಿದ ರೋಶನ್.
ಗನ್ ತೋರಿಸಿ ತನ್ನ ಜತೆಗೆ ಬರುವಂತೆ ಸೂಚಿಸಿದ್ದ. ಅವರು ಹೆದರಿ ಬಾಯ್ಮುಚ್ಚಿಕೊಂಡು ತನ್ನ ಜತೆಗೆ ಬರುವರೆಂಬ ರೋಶನ್ ಲೆಕ್ಕಾಚಾರ ಬುಡಮೇಲಾಯಿತು. ಸಹೋದರಿಯರಿಬ್ಬರು ಜೋರಾಗಿ ಕಿರುಚತೊಡಗಿದರು. ಕೂಡಲೇ ಸುತ್ತಮುತ್ತಲಿನವರು ಜಾಗೃತರಾದರು. ಅಪಹರಣದ ನಾಟಕವಾಡಿ ಹಣ ವಸೂಲಿ ಮಾಡಲಾಗದು ಎಂಬುದನ್ನು ಅರಿತ ರೋಶನ್ ಅಲ್ಲಿಂದ ಕಾಲ್ಕಿತ್ತಿದ್ದ.
ಇದನ್ನೂ ಓದಿ: ಜಗತ್ತಿನಾದ್ಯಂತ ಮಲ್ಲಕಂಬ ಜನಪ್ರಿಯಗೊಳ್ಳುತ್ತಿದೆ ನೋಡಿ..
ಬಳಿಕ ಸಿಸಿಟಿವಿ ಫೂಟೇಜ್ ನೋಡಿ ರೋಶನ್ ಚಹರೆ ಪತ್ತೆ ಹಚ್ಚಿದ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದರು. ಸಿಸಿಟಿವಿ ದೃಶ್ಯದಲ್ಲಿ ಆತನ ಬೈಕ್ ನಂಬರ್ ಕಾಣಿಸಿತ್ತು. ಅದನ್ನು ಪರಿಶೀಲಿಸಿದಾಗ ಅದು ವಿನೋದ್ ಎಂಬುವವರಿಗೆ ಸೇರಿದ ಮಿನಿ ಟ್ರಕ್ನ ನಂಬರ್ ಪ್ಲೇಟ್ ಎಂಬುದು ಬಹಿರಂಗವಾಯಿತು. ಅವರನ್ನು ಪತ್ತೆಹಚ್ಚಿದಾಗ, ಅವರ ಮಗನೇ ರೋಶನ್ ಎಂಬುದೂ ಗೊತ್ತಾಯಿತು. ಕೊನೆಗೆ ರೋಶನ್ ಧಂತೋಲಿ ಎಂಬಲ್ಲಿ ಪೊಲೀಸರಿಗೆ ಶರಣಾದ ಎಂದು ಅಂಬಝಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)