ಶಾಲಾ ಕಟ್ಟಡ ಕುಸಿತ: 14 ಕ್ಕೇರಿದ ಸಾವಿನ ಸಂಖ್ಯೆ, 50 ವಿದ್ಯಾರ್ಥಿಗಳ ಹುಡುಕಾಟ!| School collapse

untitled-design-2025-10-04t134925258-68e0d90255ba6
Published on

School collapse: ಇಂಡೋನೇಷ್ಯಾದ ಇಸ್ಲಾಮಿಕ್ ಬೋರ್ಡಿಂಗ್ ಶಾಲೆಯ ಕಟ್ಟಡ ಕುಸಿದು ಪರಿಣಾಮ 14 ಮಕ್ಕಳ ಮೃತಪಟ್ಟಿದ್ದು, ಮಣ್ಣಿನ ಆಳದಲ್ಲಿ ಸಿಲುಕಿರುವ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಕ್ಷಣಾ ತಂಡ ಹುಡುಕಾಟ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ (ಸೆ.29) ಕಟ್ಟಡ ಕುಸಿದ ನಂತರ ರಕ್ಷಣಾ ತಂಡವು ಮೊದಲು ಬದುಕುಳಿದವರಿಗಾಗಿ ಕೈಯಿಂದ ಹುಡುಕಾಟ ನಡೆಸಲು ಆರಂಭಿಸಿತು. ಆದರೆ ಗುರುವಾರದ ವೇಳೆಗೆ ಯಾವುದೇ ಜೀವಂತ ಕುರುಹುಗಳು ಸಿಗದ ಕಾರಣ, ರಕ್ಷಣಾ ತಂಡವು ವೇಗವಾಗಿ ಹುಡುಕಾಟ ನಡೆಸಲು ಜ್ಯಾಕ್‌ ಹ್ಯಾಮರ್‌ಗಳನ್ನು ಬಳಸಿ ಶೋಧ ಕಾರ್ಯ ಮುಂದುವರೆಸಿದವು.

ಶೋಧ ಕಾರ್ಯದಲ್ಲಿ ಶುಕ್ರವಾರ (ಅ.03) 9 ಶವ ಇರುವುದನ್ನು ಕಂಡುಕೊಂಡಿದ್ದು, ಒಟ್ಟಾರೆಯಾಗಿ ಈ ವರೆಗೂ 14 ಜನ ಸಾವನ್ನಪ್ಪಿದ್ದಾರೆ ಹಾಗೂ 50 ವಿದ್ಯಾರ್ಥಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನಲೆ

ಇಂಡೋನೇಷ್ಯಾದ ಜಾವಾ ದ್ವೀಪದ ಪೂರ್ವ ಭಾಗದಲ್ಲಿರುವ ಸಿಡೋರ್ಜೊದಲ್ಲಿರುವ ಶತಮಾನಗಳಷ್ಟು ಹಳೆಯದಾದ ಅಲ್ ಖೋಜಿನಿ ಇಸ್ಲಾಮಿಕ್ ಬೋರ್ಡಿಂಗ್ ಶಾಲೆಯ ಪ್ರಾರ್ಥನ ಮಂದಿರದಲ್ಲಿ ಗೋಡೆ ಕುಸಿದು ಬಿದ್ದಿದ್ದು, 2 ಮೃತ ದೇಹಗಳು ಘಟನಾ ಸ್ಥಳದಲ್ಲೇ ಸಿಕ್ಕಿವೆ ಎಂದು ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ಸಂಸ್ಥೆಯ ಮುಖ್ಯಸ್ಥ ಸುಹರ್ಯಾಂಟೊ ಹೇಳಿದ್ದಾರೆ.

ಈ ಘಟನೆಯಲ್ಲಿ 7 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಕಟ್ಟಡದ ಇನ್ನೊಂದು ಭಾಗದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸುತ್ತಿದ್ದರು ಆ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಸುದ್ದಿಮೂಲಗಳಿಗೆ ತಿಳಿಸಿದ್ದಾರೆ.

ಬದುಕುಳಿದ 104 ಜನರಲ್ಲಿ ಒಬ್ಬನಾದ ವಿದ್ಯಾರ್ಥಿ ರಿಜಲುಲ್ ಖೊಯಿಬ್ ಮಾತನಾಡಿದ್ದು, ಶಾಲೆಯಲ್ಲಿ ಪ್ರಾರ್ಥನೆ ಮಾಡುವ ವೇಳೆ ಇದ್ದಕ್ಕಿದ್ದಂತೆ ಕಟ್ಟಡ ಕುಸಿದು ಬಿತ್ತು, ಛಾವಣಿಯ ಅವಶೇಷಗಳು ನನ್ನ ತಲೆ ಹಾಗೂ ಮುಖದ ಮೇಲೆ ಬಿದ್ದವು. ನಂತರ ಕೋಣೆ ಸಂಪೂರ್ಣ ಕತ್ತಲೆಯಾಯಿತು. ಇದಾದ ನಂತರ ಯಾರೋ ಈಕಡೆ ಬಾ ಎಂದು ಕರೆದರು ಹಾಗಾಗಿ ನಾನು ಓಡಿ ಹೋದೆ ಎಂದು ತಿಳಿಸಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net