'ಸಾವಿನ ವಿಷಯದಲ್ಲೂ ಕೀಳು ರಾಜಕಾರಣ ಮಾಡ್ತಿದ್ದಾರೆ ಕಾಂಗ್ರೆಸ್ಸಿಗರು'

2manju5-Web
ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಪತ್ರಕರ್ತರಿಗೆ ವಿಶೇಷ ಆರೋಗ್ಯ ಕಾರ್ಡ್ ವಿತರಿಸಿದರು. ಗುರುನಾಥ ಕಡಬೂರ ಮತ್ತಿತರರು ಉಪಸ್ಥಿತರಿದ್ದರು.
Published on

ಬೆಳಗಾವಿ: ಕೋವಿಡ್-19 ಮಾರ್ಗಸೂಚಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದಂತೆ ಸಚಿವ ಸುರೇಶ ಅಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ’ಯಡಿ ಶುಕ್ರವಾರ ಪ್ರತಕರ್ತರಿಗೆ ವಿಶೇಷ ಆರೋಗ್ಯ ಕಾರ್ಡ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಎಷ್ಟೇ ದೊಡ್ಡವರಾಗಿದ್ದರೂ ಕೋವಿಡ್-19 ಮಾರ್ಗಸೂಚಿ ಪಾಲಿಸಬೇಕು ಎನ್ನುವುದು ಬಿಜೆಪಿ ಮತ್ತು ಸರ್ಕಾರದ ನಿಲುವಾಗಿದೆ.

ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪ್ರಚಾರಕ್ಕಾಗಿ ಕೀಳು ಮಟ್ಟದ ರಾಜಕಾರಣ ಮಾಡುವುದನ್ನು ಬಿಡಲಿ. ಕೋವಿಡ್-19ನಂತಹ ತುರ್ತು ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿಗೆ ಪಕ್ಷಾತೀತರಾಗಿ ಕೆಲಸ ಮಾಡಬೇಕಿದೆಯೇ ಹೊರತು ಜನರ ದಿಕ್ಕು ತಪ್ಪಿಸಲು ಯತ್ನಿಸಬಾರದು ಎಂದು ಕೈ ನಾಯಕರನ್ನು ರಮೇಶ ತರಾಟೆಗೆ ತೆಗೆದುಕೊಂಡರು.

ಸಿದ್ದರಾಮಯ್ಯಗೆ ಸೂಕ್ತ ಉತ್ತರ: ನೆರೆ ಸಂತ್ರಸ್ತರಿಗೆ ಸರ್ಕರದಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸೂಕ್ತ ವೇದಿಕೆಯಲ್ಲಿ ಉತ್ತರಿಸ ಲಾಗುವುದು ಕೋವಿಡ್-19 ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಅನಗತ್ಯವಾಗಿ ಆರೋಪಿಸುತ್ತಿದ್ದಾರೆ. ಆಡಳಿತದ ಪಕ್ಷದ ಬಗ್ಗೆ ಆರೋಪ ಮಾಡುವ ಮೊದಲು ಕಾಂಗ್ರೆಸ್ಸಿಗರು ಪಕ್ಷದ ಬೆಳವಣಿಗೆಗೆ ಶ್ರಮಿಸಲಿ ಎಂದರು.

ಹೈಕಮಾಂಡ್ ನಿರ್ಧಾರವೇ ಅಂತಿಮ: ದಿ.ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಂಗಡಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕೋ ಅಥವಾ ಪಕ್ಷದ ನಾಯಕರಿಗೆ ನೀಡಬೇಕೋ ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಬಿಜೆಪಿಗೆ ತನ್ನದೇ ಆದ ಸಿದ್ಧಾಂತವಿದೆ. ಹೀಗಾಗಿ ಸದ್ಯದ ಪರಿಸ್ಥತಿಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರ ಹಾಗೂ ಚರ್ಚೆ ಅನಗತ್ಯ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net