

ಭೂಪಾಲ್: ಮಹಿಳೆಯೊಬ್ಬರು ಮೃತಪಟ್ಟ 10 ವರ್ಷಗಳಿಕ 7 ಕೋಟಿ ರೂ. ತೆರಿಗೆ ನೋಟಿಸ್ನ್ನು ಆಕೆಯ ಕುಟುಂಬಸ್ಥರು ಸ್ವೀಕರಿಸಿರುವ ಘಟನೆ ಮಧ್ಯಪ್ರದೇಶದ ಭೂಪಾಲ್ನಲ್ಲಿ ನಡೆದಿದೆ.
ಉಷಾ ಸೋನಿ ಪಟಖೇಡ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಜುಲೈ 26 ರಂದು ಆಕೆಯ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದ್ದು, 7 ಕೋಟಿ ರೂ. ತೆರಿಗೆ ಪಾವತಿಗೆ ಆದೇಶ ನೀಡಿದೆ. ಈ ಮೊತ್ತಕ್ಕಿಂತ ಹೆಚ್ಚಾಗಿ ಆಕೆಯ ಕುಟುಂಬವನ್ನು ದಿಗ್ಭ್ರಮೆಗೊಳಿಸಿರುವ ಸಂಗತಿಯೆಂದರೆ, ಶಿಕ್ಷಕಿ 2013 ರಲ್ಲಿ ಮೃತಪಟ್ಟಿದ್ದು, ಈ ನೋಟೀಸ್ 2017-18 ರ ಆದಾಯದ ಮೌಲ್ಯಮಾಪನಕ್ಕೆ ಸಂಬಂಧಿಸಿದೆ.
ಇದನ್ನೂ ಓದಿ: ಜೀವಕ್ಕೆ ಮಾರಕವಾಯ್ತಾ ಅತಿಯಾದ ಡಯಟ್? ಹಸಿ ತರಕಾರಿ, ಹಣ್ಣು ಸೇವಿಸುತ್ತಿದ್ದ ಮಹಿಳೆ ನಿಗೂಢ ಸಾವು
ಆಕೆಯ ಮಗ ಪವನ್ ಸೋನಿ ಈ ಕುರಿತು ದಾಖಲಿಸಿದ್ದು, ತನ್ನ ತಾಯಿ 2013 ರ ನವೆಂಬರ್ 16 ರಂದು ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾಗಿದ್ದು, ಆದಾಯ ತೆರಿಗೆಯ ನೋಟಿಸ್ 2017-18ರ ವರ್ಷಕ್ಕೆ ಸಂಬಂಧಿಸಿದೆ. ತನ್ನ ತಾಯಿಯ ಪ್ಯಾನ್ ಕಾರ್ಡ್ (ಶಾಶ್ವತ ಖಾತೆ ಸಂಖ್ಯೆ) ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ನೋಟಿಸ್ನಲ್ಲಿ 'ನ್ಯಾಚುರಲ್ ಕಾಸ್ಟಿಂಗ್' ಎಂಬ ಕಂಪನಿಯನ್ನು ಉಲ್ಲೇಖಿಸಲಾಗಿದ್ದು, ಸ್ಕ್ರ್ಯಾಪ್ ವಸ್ತುಗಳನ್ನುನ ಖರೀದಿಸಿ ಮಾರಾಟ ಮಾಡುವುದಾಗಿದೆ ಎಂದು ತಿಳಿಸಿದ್ದಾರೆ.
ಕೇವಲ ಈ ಕುಟುಂಬ ಮಾತ್ರ ಅಲ್ಲ. ಆದಿವಾಸಿಗಳ ಪ್ರಾಬಲ್ಯವಿರುವ ಬೇತುಲ್ ಜಿಲ್ಲೆಯಲ್ಲಿ ಸುಮಾರು 44 ಜನರು 1 ಕೋಟಿ ರೂ. ಯಿಂದ 10 ಕೋಟಿ ರೂ. ಮೊತ್ತದ ತೆರಿಗೆ ನೋಟಿಸ್ಗಳನ್ನು ಸ್ವೀಕರಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿದ್ದು, ಪ್ಯಾನ್ ದುರುಪಯೋಗದ ಬಗ್ಗೆ ಇಲ್ಲಿಯವರೆಗೆ ಎರಡು ದೂರುಗಳು ಬಂದಿವೆ. ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬೆತುಲ್ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಚೌಧರಿ ಹೇಳಿದ್ದಾರೆ.(ಏಜೆನ್ಸೀಸ್)