ನಾಪತ್ತೆ ಆಗಿದ್ದವ ಅಂತ್ಯಕ್ರಿಯೆ ವೇಳೆ ಪತ್ತೆ! ಪುನಃ ನಾಮಕರಣ, ಮರು ಮದುವೆ

wedding
ಸಾಂದರ್ಭಿಕ ಚಿತ್ರ
Published on

ಡೆಹ್ರಾಡೂನ್​: ಕುಟುಂಬಸ್ಥರಿಂದ ದೂರವಾಗಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಮೃತನಾಗಿದ್ದಾನೆ ಎಂದು ಅಂತ್ಯಸಂಸ್ಕಾರ ಮಾಡುವ ವೇಳೆ ಎಲ್ಲರಿಗೂ ಆಶ್ಚರ್ಯವಾಗುವಂತೆ ಆತ ಜೀವಂತವಾಗಿ ಪತ್ತೆಯಾಗಿರುವ ಘಟನೆ ಉತ್ತರಾಖಂಡದ ಉಧಮ್​ ಸಿಂಗ್​ ನಗರ್​ ಜಿಲ್ಲೆಯಲ್ಲಿ ನಡೆದಿದೆ.

ಮೂಲತಃ ಉಧಮ್​ ಸಿಂಗ್​ ನಗರ ಜಿಲ್ಲೆಯ ಧಾಪ್ಲಾ ನಿವಾಸಿ ನವೀನ್​ ಚಂದ್ರ ಭಟ್​(42) ಮದ್ಯದ ಚಟದಿಂದ ಮನೆಯಿಂದ ನಾಪತ್ತೆಯಾಗಿದ್ದರು. ನವೀನ್​ ತಂದೆ ಧರ್ಮಾನಂದ ಭಟ್​ ಅವರಿಗೆ ನ.25ರಂದು ಪೊಲೀಸರು ಕರೆ ಮಾಡಿ, ಹಲ್ದಾವನಿಯಲ್ಲಿ ವಾರಸುದಾರರಿಲ್ಲದ ಶವ ಪತ್ತೆಯಾಗಿದ್ದು, ಅವರ ಜೇಬಿನಿಂದ ನವೀನ್​ ಭಟ್​ ಎಂದು ಬರೆದ ಚೀಟಿ ವಶಪಡಿಸಿಕೊಳ್ಳಲಾಗಿದೆ ಎಂದಿದ್ದರು. ನಂತರ ಕುಟುಂಬಸ್ಥರು ಹೋಗಿ ಅದು ನವೀನ್​ ಶವ ಎಂದು ಗುರುತಿಸಿದ್ದು, ಬಳಿಕ ಅಂತ್ಯಕ್ರಿಯೆ ನೆರವೇರಿಸಲು ಸಜ್ಜಾಗಿದ್ದರು.

ಈ ಮಧ್ಯೆ ಒಂದು ದಿನದ ಹಿಂದೆ ರುದ್ರಪುರದಲ್ಲಿ ನವೀನ್​ನನ್ನು ನೋಡಿದ್ದಾಗಿ ಕುಟುಂಬದ ಪರಿಚಯಸ್ಥರೊಬ್ಬರು ತಿಳಿಸಿದ್ದಾರೆ. ಕುಟುಂಬದ ಸಂದೇಹ ಹೋಗಲಾಡಿಸಲು ಆ ವ್ಯಕ್ತಿ ನವೀನ್​ ಮತ್ತು ಆತನ ಸಂಬಂಧಿಕರ ನಡುವೆ ವೀಡಿಯೋ ಕರೆ ಮಾಡಿ, ಆತ ಎಲ್ಲಿದ್ದಾನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾನೆ.

ಬದುಕಿರುವಾಗಲೇ ಅಂತ್ಯಕ್ರಿಯೆಗೆ ಸಜ್ಜಾದ್ದರಿಂದ ನವೀನ್​ಗೆ ನಾರಾಯಣ ಭಟ್​ ಎಂದು ಮರುನಾಮಕರಣ ಮಾಡಿ, ಅವರ ಹೆಂಡತಿ ಜತೆ ಮರುಮದುವೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net