

ರಾಮ ಕಿಶನ್ ಕೆ.ವಿ. ಬೆಂಗಳೂರು
'ಬ್ರ್ಯಾಂಡ್ ಬೆಂಗಳೂರು' ಅಭಿಯಾನದ ಮೂಲಕ ನಗರದ ವಿವಿಧ ಭಾಗಗಳು ಸುಂದರಗೊಳ್ಳುತ್ತಿವೆ. ವಿವಿಧ ಕಡೆಗಳಲ್ಲಿ ರಚನೆಯಾಗಿರುವ ಬಣ್ಣ ಬಣ್ಣದ ಕಲಾಕೃತಿಗಳು ಸಾರ್ವಜನಿಕರ ಮನಗೆಲ್ಲುತ್ತಿದ್ದು, ಆಕರ್ಷಣೀಯ ತಾಣವಾಗಿ ಬದಲಾಗುತ್ತಿವೆ. ಶಾಂತಿನಗರ ಡಬಲ್ ರೋಡ್ ರಸ್ತೆಯಲ್ಲಿ ಸಿಗುವ ಫ್ಲೈಓವರ್ನಲ್ಲಿ ಬಿಡಿಸಲಾಗಿರುವ ಕಲಾಕೃತಿಗಳು ಜನರ ಗಮನ ಸೆಳೆಯುತ್ತಿವೆ.
ರಾಜ್ಯದ ಸಾಕಷ್ಟು ಮಂದಿ ರಾಷ್ಟ್ರೀಯ ಹಾಗೂ ದೇಶೀಯ ಮಟ್ಟದಲ್ಲಿ ಕ್ರಿಕೆಟ್ ಅನ್ನು ಪ್ರತಿನಿಧಿಸಿದ್ದಾರೆ. ಜತೆಗೆ ಅನೇಕ ದಾಖಲೆಗಳನ್ನೂ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ಅವರಲ್ಲಿ ಪ್ರಮುಖ 10 ಜನ ಕ್ರಿಕೆಟ್ ತಾರೆಯರನ್ನು ಶಾಂತಿನಗರ ಡಬಲ್ ರೋಡ್ನ ಫ್ಲೈಓವರ್ನ ಪಿಲ್ಲರ್ಗಳಲ್ಲಿ ಚಿತ್ರಿಸಲಾಗಿದೆ.
ಇಂಡಿಯಾ ರೈಸಿಂಗ್ ಟ್ರಸ್ಟ್ ಸಂಸ್ಥೆಯ ಮುಂದಾಳತ್ವದಲ್ಲಿ ಕಲಾಕೃತಿಗಳು ರಚನೆಯಾಗಿವೆ. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಎರಪಳ್ಳಿ ಪ್ರಸನ್ನ, ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ, ವಿ. ಸುಬ್ರಹ್ಮಣ್ಯ, ಶಾಂತಾ ರಂಗಸ್ವಾಮಿ, ಬಿ.ಎಸ್. ಚಂದ್ರಶೇಖರ್ ಅವರ ಆಕರ್ಷಕ ಚಿತ್ರಗಳನ್ನು ರಚಿಸಲಾಗಿದೆ.
ಕ್ರಿಕೆಟ್ ದೇಶದ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ರಾಜ್ಯದ ಅನೇಕ ಆಟಗಾರರು ಭಾರತ ತಂಡದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕರ್ನಾಟಕ ತಂಡ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಮುಂದಿನ ವರ್ಷ 50 ವಸಂತಗಳನ್ನು ಪೂರೈಸುತ್ತಿದೆ. ಇಂತಹ ಕುತೂಹಲಕರ ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು ಕ್ರಿಕೆಟ್ ತಾರೆಯರನ್ನು ಚಿತ್ರಿಸಲಾಗಿದೆ ಎಂದು ಇಂಡಿಯಾ ರೈಸಿಂಗ್ ಟ್ರಸ್ಟ್ ಸಂಸ್ಥೆಯ ಸ್ವಯಂ ಸೇವಕರು ವಿವರಿಸಿದ್ದಾರೆ.
ನಗರದ ಪ್ರಮುಖ ಐದು ಕ್ರೀಡಾಂಗಣಗಳಾದ ಚಿನ್ನಸ್ವಾಮಿ ಕ್ರೀಡಾಂಗಣ, ಕಂಠೀರವ ಕ್ರೀಡಾಂಗಣ, ಕೆಎಸ್ಎಚ್ಎ ಹಾಕಿ ಕ್ರೀಡಾಂಗಣ, ಬೆಂಗಳೂರು ುಟ್ಬಾಲ್ ಕ್ರೀಡಾಂಗಣ ಹಾಗೂ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಕ್ರೀಡಾಂಗಣಗಳು ಈ ಮೇಲ್ಸೇತುವೆಯಿಂದ 2 ಕಿ.ಮೀ. ಅಂತರದಲ್ಲಿವೆ. ಜತೆಗೆ ಜಂಕ್ಷನ್ ಸುತ್ತಮುತ್ತಲಿರುವ ಸಾಕಷ್ಟು ಶಾಲಾ&ಕಾಲೇಜುಗಳು ಅನೇಕ ಕ್ರೀಡಾಪಟುಗಳನ್ನು ಕ್ರೀಡಾ ಕ್ಷೇತ್ರಕ್ಕೆ ಕೊಡುಗೆಯಾಗಿ ಕೊಟ್ಟಿದೆ. ಹೀಗಾಗಿ ರಾಜ್ಯದ ಹೆಸರಾಂತ ಕ್ರಿಕೆಟ್ ಪಟುಗಳನ್ನು ಚಿತ್ರಿಸಲಾಗಿರುವ ಪ್ರದೇಶವನ್ನು "ಕ್ರೀಡಾ ಜಂಕ್ಷನ್' ಎಂದು ಇಂಡಿಯಾ ರೈಸಿಂಗ್ ಟ್ರಸ್ಟ್ ಸಂಸ್ಥೆ ಕರೆದಿದೆ.
ಮೇಲ್ಸೇತುವೆಯ ಪಿಲ್ಲರ್ಗಳಿಗೆ ಪೋಸ್ಟರ್ಗಳನ್ನು ಅಂಟಿಸುವ ಮೂಲಕ, ವಿರೂಪಗೊಳಿಸುವುದು ಸರಿಯಲ್ಲ. ಇವುಗಳು ಆಕರ್ಷಕವಾಗಿ ಕಾಣುವಂತೆ ಮಾಡಬೇಕಾಗಿದೆ. ಸದ್ಯ ಐದು ಪಿಲ್ಲರ್ಗಳಲ್ಲಿ ಕ್ರಿಕೆಟ್ ಕ್ಷೇತ್ರದ ಸಾಧಕರನ್ನು ಚಿತ್ರಿಸಲಾಗಿದೆ. 12 ಪಿಲ್ಲರ್ಗಳು ಬಾಕಿಯಿದ್ದು, ಅವುಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕ್ರೀಡಾ ಸಾಧಕರನ್ನು ಚಿತ್ರಿಸುವ ಗುರಿ ಹೊಂದಿದ್ದೇವೆ. ಬಳಿಕ ಬ್ರಾ$್ಯಂಡ್ ಬೆಂಗಳೂರು ಕಾರ್ಯಕ್ರಮದಡಿ ಇವುಗಳನ್ನು ಲೋಕಾರ್ಪಣೆಗೊಳಿಸಲಾಗುತ್ತದೆ ಎಂದು ಇಂಡಿಯಾ ರೈಸಿಂಗ್ ಟ್ರಸ್ಟ್ ಸಂಸ್ಥೆಯ ಪದಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.