

ನವದೆಹಲಿ : ಮಹಿಳೆಯೊಬ್ಬಳನ್ನು ಕೊಂದು ಅವಳ ದೇಹವನ್ನು ಬೆಡ್ಶೀಟಲ್ಲಿ ಸುತ್ತಿಕೊಂಡು ಆಟೋದಲ್ಲಿ ಸಾಗಿಸುತ್ತಿದ್ದ ಯುವಕರು ಗಸ್ತು ಪೊಲೀಸರಿಗೆ ಸಿಕ್ಕಿಬಿದ್ದಿರುವ ಪ್ರಸಂಗ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧವಾಗಿ 21 ವರ್ಷದ ರಾಜನ್ ಗುಪ್ತ, 19 ವರ್ಷದ ಮಹೇಂದ್ರ ನಾಥ್ ಮತ್ತು ಒಬ್ಬ ಅಪ್ರಾಪ್ತ ವಯಸ್ಕನನ್ನು ಬಂಧಿಸಲಾಗಿದೆ.
ಆರೋಪಿಗಳು ದೆಹಲಿಯ ಹೊರಾಂಗಣ ಪ್ರದೇಶದಲ್ಲಿ ದುಡ್ಡಿನ ವಿಷಯವಾಗಿ ಬಿರುಸಿನ ಚರ್ಚೆ ನಡೆದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳ ಕತ್ತು ಹಿಸುಕಿ ಸಾಯಿಸಿದ್ದರು. ನಂತರ ಹೆಣವನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಬೆಡ್ಶೀಟಲ್ಲಿ ಸುತ್ತಿ ಮುಖ್ಯ ಆರೋಪಿ ರಾಜನ್ ಗುಪ್ತನ ತಂದೆಗೆ ಸೇರಿದ ಆಟೋದಲ್ಲಿ ಸಾಗಿಸುತ್ತಿದ್ದರು ಎನ್ನಲಾಗಿದೆ.
ಜೂನ್ 22 ರಂದು ನೈಟ್ ಪಾಟ್ರೋಲ್ನಲ್ಲಿದ್ದ ಪೊಲೀಸ್ ಪೇದೆ ಭನ್ವರ್ ಸಿಂಗ್ ಮತ್ತು ಇನ್ನಿಬ್ಬರು ಅಮನ್ ವಿಹಾರ್ ಪ್ರದೇಶದಲ್ಲಿ ಬೈಕಲ್ಲಿ ಗಸ್ತು ನಡೆಸುತ್ತಿದ್ದರು. ಬೆಳಗಿನ ಜಾವ 3.15 ಕ್ಕೆ ಕಾಂಝಾವಾಲಾ ಕಡೆಯಿಂದ ಆಟೋರಿಕ್ಷಾ ಬರುತ್ತಿದ್ದುದನ್ನು ನೋಡಿದರು. ರಿಕ್ಷಾದ ಮುಂಗಡೆ ಲೈಟು ಆಫ್ ಆಗಿದ್ದರಿಂದ ನಿಲ್ಲಿಸಲು ಹೇಳಿದರು. ಆದರೆ ನಿಲ್ಲಿಸುವ ಬದಲು, ಚಾಲಕನು ವೇಗವಾಗಿ ಓಡಿಸಲು ಆರಂಭಿಸಿದ. 300 ಮೀಟರ್ ಓಡಿಸಿಕೊಂಡು ಹೋಗಿ ಆಟೋವನ್ನು ಹಿಡಿದು ನಿಲ್ಲಿಸಲು ಸಾಧ್ಯವಾಯಿತು ಎನ್ನಲಾಗಿದೆ.
ಚಾಲಕ ಓಡಿಹೋಗಿಬಿಟ್ಟ. ಆದರೆ ಹಿಂದುಗಡೆ ಕೂತಿದ್ದ ಪ್ರಯಾಣಿಕರು ಬೆಡ್ಶೀಟಲ್ಲಿ ಏನನ್ನೋ ಸಾಗಿಸುತ್ತಿರುವುದು ಕಂಡುಬಂತು. ಪರಿಶೀಲಿಸಿದಾಗ ಮಹಿಳೆಯ ಶವ ಕಂಡದ್ದರಿಂದ, ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ತನಿಖೆ ಆರಂಭಿಸಲಾಯಿತು. ಆಟೋವನ್ನು ಸೀಜ್ ಮಾಡಿ, ಫೊರೆನ್ಸಿಕ್ ತಂಡಕ್ಕೆ ಬೆರಳಚ್ಚು ಸಂಗ್ರಹಿಸಲು ನೀಡಲಾಗಿದೆ. ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದು, ಇಬ್ಬರು 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಪ್ರಾಪ್ತ ವಯಸ್ಕ ಆರೋಪಿಯನ್ನು ಕರೆಕ್ಷನ್ ಹೋಂಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)