ಹಸುವಿನ ಮಾಂಸ ತ್ಯಾಜ್ಯ ಸಾಗಾಟ: ನಟಿ ಐಂದ್ರಿತಾ ರೇ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಸಿಪಿ ಸಿ.ಕೆ. ಬಾಬಾ

Aindritha Ray
Published on

ಬೆಂಗಳೂರು: ಟ್ರಕ್​ನಲ್ಲಿ ಹಸುವಿನ ಮಾಂಸ ತ್ಯಾಜ್ಯವನ್ನು ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದು, ಪೊಲೀಸರು ತನಿಖೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ನಟಿ ಐಂದ್ರಿತಾ ರೇ ಆರೋಪಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಸ್ಪಷ್ಟನೆ ನೀಡಿದ್ದಾರೆ.

ಟ್ರಕ್​​ನಲ್ಲಿದ್ದ ಮಾಂಸದ ತ್ಯಾಜ್ಯವನ್ನು ಪರಿಶೀಲನೆ ನಡೆಸಲಾಗಿದೆ. ಟ್ರಕ್​​ನಲ್ಲಿದ್ದದ್ದು ಹಸುವಿನ ಮಾಂಸದ ತ್ಯಾಜ್ಯವಲ್ಲ. ಮೂಳೆಗಳು, ಕೊಂಬು ಹಾಗೂ ಚರ್ಮ ಹಸುವಿನದ್ದಲ್ಲ. ಆ ತ್ಯಾಜ್ಯವೂ ಬಿಬಿಎಂಪಿ ಪೂರ್ವ ವಿಭಾಗದ ಕಸಾಯಿಖಾನೆಗೆ ಸಂಬಂಧಪಟ್ಟಿದ್ದು ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಡಿಸಿಪಿ ಬಾಬಾ ಅವರು ಸ್ಪಷ್ಟನೆ ನೀಡಿದ್ದಾರೆ.

ಐಂದ್ರಿತಾ ರೇ ಆರೋಪವೇನು? 

ಕಳೆದ ರಾತ್ರಿ ಟ್ರಕ್​ವೊಂದರಲ್ಲಿ ಗೋವಿನ ದೇಹದ ಭಾಗಗಳು ಕಂಡುಬಂದಿವೆ ಎಂದು ಹೇಳಿರುವ ನಟಿ, ಸದ್ಯ ಆ ಟ್ರಕ್​ ಬೊಮ್ಮನಹಳ್ಳಿ ಪೊಲೀಸ್ ಠಾಣೆ ಬಳಿ ಇದೆ ಎಂದೂ ಮಾಹಿತಿ ನೀಡಿದ್ದರು. ಈ ವಿಚಾರವನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಗೋಮಾಂಸದ ತ್ಯಾಜ್ಯ ಇರುವ ಈ ಟ್ರಕ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್​ಐಆರ್​ ದಾಖಲು ಮಾಡಲು ಪೊಲೀಸರು ಹಿಂಜರಿಯುತ್ತಿದ್ದಾರೆ ಎಂದಿರುವ ಐಂದ್ರಿತಾ, ಬೆಂಗಳೂರು ಪೊಲೀಸರು, ಪೊಲೀಸ್ ಕಮಿಷನರ್ ಅವರಿಗೂ ಮೆನ್ಷನ್ ಮಾಡಿದ್ದರು. ಮಾತ್ರವಲ್ಲ, ಗೋಹತ್ಯೆ ಅಪರಾಧ ಎಂದಿರುವ ಐಂದ್ರಿತಾ, ಈ ಕುರಿತಂತೆ ಪ್ರಧಾನಿ ಮೋದಿಯವರ ಎಕ್ಸ್ ಹ್ಯಾಂಡಲ್​ಗೂ ಮೆನ್ಷನ್ ಮಾಡಿ, ಗಮನ ಸೆಳೆಯಲು ಯತ್ನಿಸಿದರು.

ಇದೀಗ ಐಂದ್ರಿತಾ ರೇ ಆರೋಪಕ್ಕೆ ಸ್ವತಃ ಡಿಸಿಪಿ ಅವರೇ ಸ್ಪಷ್ಟನೆ ನೀಡಿದ್ದು, ವಿವಾದಕ್ಕೆ ತೆರೆಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net