ಬೆಂಗಳೂರು ವ್ಯಾಪ್ತಿಯ ಸಂಸದರು-ಶಾಸಕರ ಸಭೆ ಕರೆದ ಡಿಸಿಎಂ: ಯಾವಾಗ ಸಭೆ, ಉದ್ದೇಶವೇನು?

D. K. Shivakumar
Published on

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಧಾನಿ ಬೆಂಗಳೂರಿನ ಅಂದರೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಂಸದರು-ಶಾಸಕರ ಸಭೆ ಕರೆದಿದ್ದು, ಸಂಬಂಧಿತ ಜನಪ್ರತಿನಿಧಿಗಳೆಲ್ಲೂ ಹಾಜರಾಗಬೇಕು ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಇದೇ ಜೂ. 5ರ ಸೋಮವಾರ ವಿಧಾನಸೌಧದಲ್ಲಿ ಈ ಸಭೆ ನಡೆಯಲಿದ್ದು, ಬಿಬಿಎಂಪಿ ವ್ಯಾಪ್ತಿಯ ಎಲ್ಲ ಸಂಸದರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಬಿದ್ದ ಭಾರಿ ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಅನಾಹುತಗಳು ಸಂಭವಿಸಿದ್ದು, ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರವಾಹದಿಂದ ಉಂಟಾಗಬಹುದಾದ ಹಾನಿಗಳನ್ನು ತಡೆಗಟ್ಟಲು ತೆಗೆದುಕೊಂಡಿರುವ ಮತ್ತು ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು ಹಾಗೂ ಬೆಂಗಳೂರಿನ ನಾಗರಿಕರು ಎದುರಿಸುತ್ತಿರುವ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ನಗರದ ಹೆಗ್ಗುರುತನ್ನು ಮರುಸ್ಥಾಪಿಸಿ ನಗರದ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚು ಮಾಡುವ ಕುರಿತು, ಬಿಬಿಎಂಪಿ ವ್ಯಾಪ್ತಿಯ ಸಂಸದರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಂದ ಅಭಿಪ್ರಾಯ-ಸಲಹೆಗಳನ್ನು ಪಡೆದುಕೊಳ್ಳಲು ಈ ಸಭೆ ಕರೆಯಲಾಗಿದೆ ಎಂದೂ ಅವರು ಜನಪ್ರತಿನಿಧಿಗಳಿಗೆ ಪತ್ರಮುಖೇನ ಕೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net