

ಕೋಲಾರ: ಕಾಂಗ್ರೆಸ್ ಸಭೆಯಲ್ಲಿ ಅಶಿಸ್ತು ತೋರಿದ ಆರೋಪದ ಮೇರೆಗೆ ನಾಲ್ವರನ್ನು ಅಮಾನತುಪಡಿಸಲಾಗಿದೆ ಎಂದು ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾಧ್ಯಕ್ಷರು ದಾಖಲೆ ನೀಡಲಿ. ಅಮಾನತು ಮಾಡಲು ಜಿಲ್ಲಾಧ್ಯಕ್ಷರಿಗೆ ಅಧಿಕಾರವಿಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಾನತು ಮಾಡುವ ಅಧಿಕಾರ ಇರುವುದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ಮಾತ್ರ, ಅಧಿಕಾರ ಇಲ್ಲದೆಯೇ ಅಧ್ಯಕ್ಷರು ಈ ರೀತಿ ಹೇಳಿಕೆ ನೀಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಮೊದಲು ನನ್ನ ಮೇಲೆ ಆರೋಪ ಮಾಡಿದ್ದರು. ಬಳಿಕ ಎಂಎಲ್ಸಿ ಅನಿಲ್‌ಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಹೀಗೆ ಒಂದೊಂದು ಹೇಳಿಕೆ ನೀಡುವ ಜಿಲ್ಲಾಧ್ಯಕ್ಷರ ಮಾತುಗಳನ್ನು ಹೇಗೆ ನಂಬಬೇಕು ಎಂದು ಪ್ರಶ್ನಿಸಿದರು.
ಘಟನೆಗೆ ಸಂಬಂಧ ಇರುವವರೆಗೆ ರೋಗಗಳು ತಟ್ಟಲಿ ಎಂದು ನಾನು ಈಗಾಗಲೇ ಶಾಪ ಹಾಕಿದ್ದೇನೆ. ನಾವೂ ಅವರೊಂದಿಗೆ ಕುಳಿತು ಮಾತನಾಡಲ್ಲ. ಕಾಂಗ್ರೆಸ್ ಸಭೆಗೆ ಊಟದ ವ್ಯವಸ್ಥೆ ನಾನು ಮಾಡಬೇಕು. ಕಲ್ಯಾಣ ಮಂಟಪದ ಖರ್ಚು ನಂಜೇಗೌಡರು ನೋಡಿಕೊಳ್ಳಬೇಕು. ಕನಿಷ್ಠ ಅದು ಯಾವ ಸಭೆ ಎನ್ನುವ ಬ್ಯಾನರ್ ಹಾಕಲೂ ಆಗದವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಲಾಯಕ್ಕೇ ಎಂದು ಲೇವಡಿ ಮಾಡಿದರು.
ಅಮಾನತು ವಿಚಾರಕ್ಕೆ ಈಗಾಗಲೇ ಕೆಪಿಸಿಸಿ ಉಪಾಧ್ಯಕ್ಷ ತಡೆಯಾಜ್ಞೆ ಕೊಟ್ಟಿದ್ದಾರೆ. ಅವರಲ್ಲಿ ಯಾರು ಯಾವಾಗ ಏನೇನು ಮಾಡಿದ್ದಾರೆ ಎನ್ನುವ ಬಗ್ಗೆ ನಾವೂ ಸಹ ಹೈಕಮಾಂಡ್‌ಗೆ ವರದಿ ಸಲ್ಲಿಸುತ್ತೇವೆ ಎಂದರು.
ಮಾಜಿ ಸ್ಪೀಕರ್ ರಮೇಶ್‌ಕುಮಾರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಸುಮ್ಮನೆ ಇಲ್ಲ. ಮನೆಯಲ್ಲಿದ್ದುಕೊಂಡೇ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಿಜೆಪಿ ಮುಖಂಡ ಕೆ.ಚಂದ್ರಾರೆಡ್ಡಿ ಪುನಃ ಕಾಂಗ್ರೆಸ್‌ಗೆ ಬಂದರೆ ನಮ್ಮ ವಿರೋಧವಿಲ್ಲ ಎಂದರು.
ಗಟ್ಟಿಯಾಗಿದೆ ಸಿಎಂ ಸ್ಥಾನ
ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎನ್ನುವ ಮಾತುಗಳನ್ನು ಪ್ರತಿ ಪಕ್ಷದವರು ಆಗಾಗ ಹೇಳುತ್ತಿರಬೇಕು, ಆಗಲೇ ನಾವು ಹುಷಾರಾಗಿರಲು ಸಾಧ್ಯ. ಸಿದ್ದರಾಮಯ್ಯ ಸ್ಥಾನ ಗಟ್ಟಿಯಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಇಡೀ ರಾಜ್ಯದಲ್ಲೇ ಕೋಲಾರ ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದಿದ್ದೇನೆ, ಸಿಎಂ ಕ್ಷೇತ್ರಕ್ಕೂ ಇಷ್ಟು ಅನುದಾನ ಸಿಕ್ಕಿಲ್ಲ ಎಂದು ಕೊತ್ತೂರು ಮಂಜುನಾಥ್ ಹೇಳಿದರು.