ಬೈಕ್​ನಲ್ಲಿ ಹೋಗ್ತಿದ್ದ ಮಗಳ ಪ್ರಿಯಕರನನ್ನು ದೊಣ್ಣೆಯಲ್ಲಿ ಬೀಳಿಸಿ 18 ಬಾರಿ ಎದೆಗೆ ಚಾಕು ಇರಿದರು

Murder
Published on

ಚಿಕ್ಕಬಳ್ಳಾಪುರ: ಯುವಕನ ಕೊಲೆಗೆ ರೊಚ್ಚಿಗೆದ್ದ ಮೃತ ಯುವಕನ ಸಂಬಂಧಿಕರು, ಕೊಲೆ ಮಾಡಿದ ಪ್ರಿಯತಮೆಯ ತಂದೆಯ ಮನೆಯನ್ನ ಧ್ವಂಸ ಮಾಡಿ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಗವಮದ್ದಲಖಾನೆ ಗ್ರಾಮದಲ್ಲಿ ನಡೆದಿದೆ.

ಅಂದಹಾಗೆ ಇದೇ ಗ್ರಾಮದ ಶಿರಿಷಾ ಹಾಗೂ ಮೃತ ಹರೀಶ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ 10 ತಿಂಗಳ ಹಿಂದೆ ಇಬ್ಬರು ಪ್ರೇಮ ವಿವಾಹವಾಗಲು ಮನೆ ಬಿಟ್ಟು ಹೋಗಿದ್ದರು. ಈ ವೇಳೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ರಾಜೀ ಪಂಚಾಯತಿ ಮೂಲಕ ಶಿರೀಷಾಳನ್ನು ತಮ್ಮ ಮನೆಗೆ ಕರೆದುಕೊಂದು ಹೋಗಿದ್ರು ತಂದೆ ವೆಂಕಟೇಶ್. ಆದ್ರೆ, ಮನೆಗೆ ಹೋದ ಶಿರೀಷಾ ಪ್ರಿಯಕರ ಹರೀಶ್ ಕೊರಗಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು.

ಕಳೆದ 10 ತಿಂಗಳಿಂದ ತನ್ನ ಮಗಳ ಸಾವಿಗೆ ಈ ಹರೀಶ್ ಪ್ರೀತಿ ಮಾಡಿದ್ದೇ ಕಾರಣ ಅಂತ ಹೊಂಚು ಹಾಕಿ ಒಳಗೊಳಗೆ ಕುದಿಯುತ್ತಿದ್ದ ಶಿರಿಷಾ ತಂದೆ ವೆಂಕಟೇಶ್. ಕಳೆದ ರಾತ್ರಿ ತನ್ನ ಸಂಬಂಧಿ ಗಣೇಶ್ ಜತೆ ಸೇರಿ ಯುವಕ ಹರೀಶ್ ನನ್ನ ಕೊಲೆ ಮಾಡಿದ್ದಾರೆ. ಬೈಕ್ ನಲ್ಲಿ ಹೋಗುತ್ತಿದ್ದಾಗ ಹರೀಶ್ ಗೆ ಮೊದಲು ದೊಣ್ಣೆಯಲ್ಲಿ ಹೊಡೆದು ತದನಂತರ ಚಾಕುವಿನಿಂದ ಎದೆಗೆ 17ರಿಂದ18 ಬಾರಿ ಇರಿದು ಕೊಂದಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಗೇಪಲ್ಲಿ ಪೊಲೀಸರು ತಡರಾತ್ರಿಯೇ ಆರೋಪಿಗಳಾದ ವೆಂಕಟೇಶ್ ಹಾಗೂ ಗಣೇಶ್ ನನ್ನ ಬಂಧಿಸಿದ್ದಾರೆ. ಈ ಮಧ್ಯೆ ಯುವಕ ಹರೀಶ್ ಕೊಲೆಗೆ ಆಕ್ರೋಶಗೊಂಡ ಆತನ ಸಂಬಂಧಿಕರು, ವೆಂಕಟೇಶ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಬೀಗ ಹಾಕಿದ್ದ ಮನೆಯ ಬೀಗವನ್ನ ಹೊಡೆದು ಹಾಕಿ, ಕಿಟಕಿ ಬಾಗಿಲುಗಳನ್ನ ಧ್ವಂಸ ಮಾಡಿದ್ದಾರೆ. ಮನೆಯೊಳಗೆ ನುಗ್ಗಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ಬೆಂಕಿ ಹಚ್ಚುತ್ತಿದ್ದ ವೇಳೆ ಒರ್ವ ಯುವಕ ಸಹ ಬೆಂಕಿ ತಗುಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಹರೀಶ್ ಸಂಬಂಧಿಕರ ಆಕ್ರೋಶದ ಕಟ್ಟೆ ಹೊಡೆದು ಇಡೀ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಪರಿಸ್ಥಿತಿ ನಿಯಂತ್ರಿಸಲಾಗಲಿಲ್ಲ. ಕೊನೆಗೆ ಹರೀಶ್​ನನ್ನು ಅವರ ಮನೆ ಬಳಿಯೇ ಮಣ್ಣು ಮಾಡಬೇಕು ಅಂತ ಪಟ್ಟುಹಿಡಿದ್ದಾರೆ. ಸದ್ಯ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net