ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ಗೆ ರಾಜ್ಯಾತಿಥ್ಯ ಸಿಗುತ್ತಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ದುಡ್ಡಿದ್ದರೆ ಜೈಲನ್ನು ಕೂಡ ರೆಸಾರ್ಟ್ ಆಗಿ ಬದಲಾಯಿಸಿಕೊಳ್ಳಬಹುದು ಎಂಬ ಟೀಕೆ ಜನರಿಂದ ವ್ಯಕ್ತವಾಗುತ್ತಿದೆ.
ರಾಜ್ಯಾತಿಥ್ಯ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿ ಕೆಲ ಫೋಟೋಗಳು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಾಜ್ಯದ ಪೊಲೀಸ್ ವ್ಯವಸ್ಥೆಯ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಪ್ರಕರಣ ಗಂಭೀರವಾಗುತ್ತಿದ್ದಂತೆ ಜೈಲಿನ 7 ಸಿಬ್ಬಂದಿಯನ್ನು ಸರ್ಕಾರ ಅಮಾನತು ಮಾಡಿದೆ. ಅಲ್ಲದೆ, ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ದರ್ಶನ್ಗೆ ಸಿಗುತ್ತಿರುವ ರಾಜ್ಯಾತಿಥ್ಯ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಇನ್ನುಳಿದ ಆರೋಪಿಗಳಿಗೆ ಸಿಗುತ್ತಿಲ್ಲ. ದರ್ಶನ್ಗೆ ಸಹಾಯ ಮಾಡಲು ಹೋಗಿ ಜೈಲು ಪಾಲಾಗಿರುವ ಆರೋಪಿಗಳ ನಿತ್ಯ ನರಕ ಅನುಭವಿಸುತ್ತಿದ್ದಾರೆ. ಇತ್ತ ಅವರ ಕುಟುಂಬಗಳು ಕೂಡ ಕಣ್ಣೀರಿನಲ್ಲಿ ದಿನ ದೂಡುತ್ತಿದ್ದಾರೆ. ದರ್ಶನ್ ಜೊತೆ ಮತ್ತೊಬ್ಬ ಆರೋಪಿ ರಾಘವೇಂದ್ರ ಕೂಡ ಜೈಲು ಪಾಲಾಗಿದ್ದು, ಆತನ ಪತ್ನಿ ಸಹನಾ ತಮ್ಮ ಅಸಹಾಯಕ ಸ್ಥಿತಿ ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಸಹನಾ ಎರಡು ಬಾರಿ ಮಾತ್ರ ತಮ್ಮ ಗಂಡನನ್ನು ಜೈಲಲ್ಲಿ ಭೇಟಿಯಾಗಿದ್ದಾರೆ. ಆದರೆ, ದರ್ಶನ್ ಭೇಟಿಗೆ ನಿತ್ಯವೂ ಒಬ್ಬರಲ್ಲ ಒಬ್ಬರು ಹೋಗುತ್ತಾರೆ. ಇತ್ತೀಚಿಗೆ ನೇರವಾಗಿ ಭೇಟಿಯಾಗಲು ಸಾಧ್ಯವಾಗಿಲ್ಲ, ಫೋನಲ್ಲೇ ಮಾತನಾಡಿದ್ದೇನೆ. ನನ್ನ ಗಂಡ ಇಲ್ಲದೆ ಮನೆ ನಡೆಸೋದು ಕೂಡ ತುಂಬಾ ಕಷ್ಟವಾಗಿದೆ ಎಂದು ಸಹನಾ ಮಾಧ್ಯಮ ಮುಂದೆ ಕಣ್ಣೀರು ಹಾಕಿದ್ದಾರೆ. ಅಲ್ಲದೆ, ನಾವು ತುಂಬಾ ಕಷ್ಟದಲ್ಲಿದ್ದರೂ ಒಬ್ಬೇ ಒಬ್ಬ ದರ್ಶನ್ ಅಭಿಮಾನಿಗಳು ಕೂಡ ಸಹಾಯ ಮಾಡಿಲ್ಲ. ದಿನನಿತ್ಯದ ಊಟಕ್ಕೂ ಕೂಡ ಸಮಸ್ಯೆ ಆಗಿದೆ. ಮನೆಗೆ ಆಧಾರವಾಗಿದ್ದ ಗಂಡ ಜೈಲುಪಾಲಾಗಿದ್ದು, ನಮ್ಮ ಜೀವನ ಅತಂತ್ರವಾಗಿದೆ. ನಮಗೆ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಸಹನಾ ಕಣ್ಣೀರು ಹಾಕಿದ್ದಾರೆ.
ಏನಿದು ಪ್ರಕರಣ?
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.
ಭಾರತದಲ್ಲಿ ಟೆಲಿಗ್ರಾಮ್ ಬ್ಯಾನ್! ನಿಜವಾಗಲಿದೆ ಖ್ಯಾತ ಯೂಟ್ಯೂಬರ್ ಹರ್ಷ ಸಾಯಿ ಹೇಳಿದ ಮಾತು
ಜೈಲಿನಲ್ಲಿ ಡಿ ಗ್ಯಾಂಗ್ಗೆ ರಾಜಾತಿಥ್ಯ! ಫೋಟೋ ಲೀಕ್ ಆದ ಬೆನ್ನಲ್ಲೇ 7 ಅಧಿಕಾರಿಗಳು ಸಸ್ಪೆಂಡ್