

Darshan Bail Cancel : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲ ಏಳು ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ಇಂದು (ಆಗಸ್ಟ್ 14) ರದ್ದುಗೊಳಿಸಿದ ಬೆನ್ನಲ್ಲೇ ಕಾರ್ಯಪ್ರವೃತರಾಗಿರುವ ಬೆಂಗಳೂರು ಪೊಲೀಸರು ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟುವ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಎ1 ಆರೋಪಿಯಾದ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳನ್ನು ಮತ್ತೆ ಜೈಲಿಗೆ ಹಾಕಲಾಗಿದೆ. ಆದರೆ, ಈ ಕ್ಷಣದವರೆಗೆ ನಟ ದರ್ಶನ್ರನ್ನು ಬಂಧಿಸಲಾಗಿಲ್ಲ. ಕಾರಣ ದರ್ಶನ್ ಬೆಂಗಳೂರಿನಲ್ಲೇ ಇಲ್ಲ.
ನಿನ್ನೆ ರಾತ್ರಿ ಮಡಿಕೇರಿಯಲ್ಲಿ ಉಳಿದುಕೊಂಡಿದ್ದ ದರ್ಶನ್ ಇಂದು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇದೀಗ ಜಾಮೀನು ರದ್ದಾಗಿರುವ ಹಿನ್ನೆಲೆಯಲ್ಲಿ, ದರ್ಶನ್ ಬೆಂಗಳೂರಿಗೆ ವಾಪಾಸ್ಸಾಗುತ್ತಿದ್ದಾರೆ. ಬಂದ ಕೂಡಲೇ ಪೊಲೀಸರ ಮುಂದೆ ಶರಣಾಗುವ ಸಾಧ್ಯತೆ ಇದೆ.
ಸದ್ಯದ ಮಾಹಿತಿ ಪ್ರಕಾರ, ನಟ ದರ್ಶನ್ ತಮಿಳುನಾಡಿನ ಅಂದಿಯೂರಿನಿಂದ ವಾಪಸ್ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಈರೋಡ್ ಜಿಲ್ಲೆಯ ಅಂದಿಯೂರಿನಲ್ಲಿ ನಡೆಯುತ್ತಿರುವ ಗುರುನಾಥಸ್ವಾಮಿ ಕುದುರೆ ಹಾಗು ಹಸುಗಳ ಜಾತ್ರೆಗೆ ದರ್ಶನ್ ತೆರಳಿದ್ದರು. ಇಂದು ಬೆಳ್ಳಂಬೆಳಗ್ಗೆ ಚಾಮರಾಜನಗರ ಜಿಲ್ಲೆ ಗಡಿಭಾಗದ ಮೂಲಕ ಅಂದಿಯೂರಿಗೆ ತೆರಳಿದ್ದರು.
ಫಾರ್ಚುನರ್ ಕಾರು ಹಾಗೂ ವ್ಯಾಂಗ್ಲರ್ ಜೀಪ್ ಮೂಲಕ ಚಾಮರಾಜನಗರ ಗಡಿ ಪುಣಜನೂರು ಚೆಕ್ ಪೋಸ್ಟ್ ದಾಟಿ ತಮಿಳುನಾಡಿಗೆ ಹೋಗುತ್ತಿರುವ ವಿಡಿಯೋ ಕೂಡ ಲಭ್ಯವಾಗಿದೆ. ಚೆಕ್ಪೋಸ್ಟ್ನ ಸಿಸಿಟಿವಿ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ. ಅಂದಿಯೂರಿನಲ್ಲಿ ದರ್ಶನ್ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರಂತೆ! ಅನುಮಾನ ಬಂದು ಮಾಸ್ಕ್ ತೆಗೆಸಿ ನೋಡಿದಾಗ ದರ್ಶನ್ ಎಂಬುದು ಗೊತ್ತಾಗಿದೆ. ಈ ಬಗ್ಗೆ ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದು, ಮಧ್ಯಾಹ್ನ 12ಗಂಟೆಗೆ ಅಂದಿಯೂರು ಬಿಟ್ಟು ಬೆಂಗಳೂರಿನತ್ತ ದರ್ಶನ್ ಪ್ರಯಾಣ ಬೆಳೆಸಿದ್ದಾರೆ. ಮನೆಗೆ ಬಂದ ಬಳಿಕ ಪೊಲೀಸರ ಬಳಿ ಹೋಗಿ ಶರಣಾಗುವ ಸಾಧ್ಯತೆ ಇದೆ.
ಆರೋಗ್ಯ ನೆಪ ಹೇಳಿ ಹೈಕೋರ್ಟ್ನಿಂದ ಜಾಮೀನು ಪಡೆದಿದ್ದ ದರ್ಶನ್ಗೆ ಸುಪ್ರೀಂಕೋರ್ಟ್ ಇಂದು ಬಿಗ್ ಶಾಕ್ ನೀಡಿದೆ. ದರ್ಶನ್ ಸೇರಿದಂತೆ ಎಲ್ಲ 7 ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ ರದ್ದು ಮಾಡಿದೆ. ಹೈಕೋರ್ಟ್ ನೀಡಿದ ಜಾಮೀನಿನಲ್ಲಿ ದೋಷವಿದೆ. ಜೈಲಿನಲ್ಲಿ ಆರೋಪಿಗಳಿಗೆ ಫೈವ್ ಸ್ಟಾರ್ ಟ್ರೀಟ್ಮೆಂಟ್ ನೀಡಲಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು. ಇದೊಂದು ಲ್ಯಾಂಡ್ ಮಾರ್ಕ್ ತೀರ್ಪು ಎಂದು ಸುಪ್ರೀಂಕೋರ್ಟ್ ಹೇಳಿತು. ಅಲ್ಲದೆ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿ ಜೈಲಿನ ಲಾನ್ನಲ್ಲಿ ಸಿಗರೇಟ್ ಸೇದುವುದು ಕಂಡಬಂದರೆ ಜೈಲಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್ ಎಚ್ಚರಿಸಿತು. ಈ ಒಂದು ತೀರ್ಪಿನಿಂದ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳು ಮತ್ತೆ ಜೈಲು ಪಾಲಾಗಿದ್ದಾರೆ.