

ಬೆಂಗಳೂರು: ಏಪ್ರಿಲ್ 14ರಂದು ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ‘ಇಬ್ಬರಿಗೂ ಕೋವಿಡ್ ಸೋಂಕು ತಗುಲಿದೆ’ ಎಂದು ಹೇಳಿಕೊಂಡು, ನಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಇದೀಗ ಇದೇ ಜೋಡಿಯ ಕೋವಿಡ್ ವರದಿ ನೆಗೆಟಿವ್ ಬಂದಿದೆ.
ಈ ವಿಚಾರವನ್ನು ಇದೀಗ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿರುವ ಜೋಡಿ, ‘ಇಬ್ಬರೂ ಕರೊನಾ ಜತೆಗೆ ಹೋರಾಡಿದೆವು. ಇದೀಗ ಇಬ್ಬರೂ ಅದರಿಂದ ಜಯಶಾಲಿಗಳಾಗಿ ಹೊರಬಂದಿದ್ದೇವೆ. ಕೋವಿಡ್ ವರದಿ ನೆಗೆಟಿವ್ ಬಂದಿದೆ. ಹರಸಿ ಹಾರೈಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಸಂದೇಶ ರವಾನಿಸಿದೆ.
ಎರಡು ವಾರಗಳ ಹಿಂದೆ ಪಾಸಿಟಿವ್ ಬಂದ ತಕ್ಷಣ ಈ ಜೋಡಿ ಮನೆಯಲ್ಲಿಯೇ ಪ್ರತ್ಯೇಕವಾಗಿ ಕ್ವಾರಂಟೈನ್ನಲ್ಲಿದ್ದರು. ಮಿಲನಾ ಅವರ ಸಹೋದರ ವೃತ್ತಿಯಲ್ಲಿ ವೈದ್ಯರು ಆಗಿರುವ ಮಹಾಂತ್ ಅವರಿಂದ ಸಲಹೆ ಪಡೆದುಕೊಂಡಿದ್ದರು. ಇದೀಗ ಕರೊನಾವನ್ನು ಗೆದ್ದು ಬಂದಿದ್ದಾರೆ. ಎಲ್ಲರೂ ಮನೆಯಲ್ಲಿಯೇ ಇರಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.