ಅಪಾಯಕಾರಿ ರಸ್ತೆ, ಶಿಥಿಲ ಸೇತುವೆ: ನಿಡಿಗಲ್- ಇಂದಬೆಟ್ಟು ರೋಡ್ ದುಸ್ತಿತಿ : ಕುಸಿವ ಭೀತಿಯಲ್ಲಿ ಅಂಬಡಬೆಟ್ಟು ಬ್ರಿಡ್ಜ್

03
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡಿಗಲ್ ಇಂದಬೆಟ್ಟು ರಸ್ತೆ ಕುಸಿದಿದ್ದು, ಜತೆಗೆ ಅದೇ ರಸ್ತೆಗೆ ಸಂಪರ್ಕಿಸುವ ಹಲಕೆ ಎಂಬಲ್ಲಿನ ಕಿರು ಸೇತುವೆಯೂ ಪಿಲ್ಲರ್ ಕುಸಿತದಿಂದ ಅಪಾಯದಲ್ಲಿದೆ.

ಹಲಕೆಯ ಅಂಬಡಬೆಟ್ಟು ಹಳ್ಳಕ್ಕೆ ಅಡ್ಡಲಾಗಿ ಈ ಕಿರು ಸೇತುವೆ ನಿರ್ಮಿಸಲಾಗಿದ್ದು, ತಡೆಬೇಲಿಯೂ ಇಲ್ಲದೇ ತೀರಾ ಅಪಾಯಕಾರಿ ಸ್ಥಿತಿಯಲ್ಲಿದೆ. ಸೇತುವೆಯ ಬುಡಭಾಗದಲ್ಲಿ ಜರಿಯಲಾರಂಭಿಸಿದ್ದು, ತೀರಾ ಶಿಥಿಲಾವಸ್ಥೆಗೆ ತಲುಪಿದೆ. ಭಾರಿ ವಾಹನ ಸಂಚರಿಸಿದರೆ ಕುಸಿಯುವ ಭೀತಿ ಇದ್ದು, ನಿತ್ಯವೂ ಸ್ಥಳೀಯರು ಜೀವಭಯದಲ್ಲೇ ಈ ಕಿರುಸೇತುವೆ ಮೇಲೆ ಸಂಚರಿಸುತ್ತಿದ್ದಾರೆ.

ಸಂಚಾರ ನಿಷೇಧ: ಕಿರುಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದ್ದುದ್ದರಿಂದ ಜಿಲ್ಲಾಧಿಕಾರಿ ಕಳೆದ ವರ್ಷವೇ ಈ ಸೇತುವೆ ಮೇಲಿನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದರು. ಲಘು ವಾಹನಗಳಷ್ಟೇ ಸಂಚರಿಸುತ್ತಿದ್ದು, ಭಾರಿ ವಾಹನಗಳು ಸುತ್ತಿಬಳಸಿ ಸಂಚರಿಸುತ್ತಿದ್ದವು. ಬಳಿಕ ಬಿರುಕು ಬಿಟ್ಟಿದ್ದ ಪಿಲ್ಲರ್‌ಗಳಿಗೆ ಕಾಂಕ್ರಿಟ್ ತೇಪೆ ಹಾಕಲಾಗಿದ್ದು, ವಾಹನ ಸಂಚಾರ ಈಗಾಗಲೇ ಆರಂಭಗೊಂಡಿದೆ. ಆದರೆ ನೀರಿನಲ್ಲಿ ಹರಿದುಬರುವ ದಿಮ್ಮಿಗಳು ಗುದ್ದಿದೆ ಪಿಲ್ಲರ್‌ಗಳು ಕುಸಿಯುವ ಭೀತಿ ಇದೆ.

2.50 ಕೋಟಿ ರೂ. ಅನುದಾನ: ಹೊಸ ಕಿರುಸೇತುವೆ ನಿರ್ಮಾಣಕ್ಕಾಗಿ ಎರಡು ವರ್ಷಗಳ ಹಿಂದೆ ಸರ್ಕಾರದಿಂದ 2.50 ಕೋಟಿ ರೂ. ಮಂಜೂರಾಗಿದೆಯಾದರೂ ಸೇತುವೆ ಮಾತ್ರ ನಿರ್ಮಾಣಗೊಂಡಿಲ್ಲ. ಶಾಸಕ ಹರೀಶ್ ಪೂಂಜ ಕಳೆದ ಅವಧಿಯಲ್ಲಿ ನಿಡಿಗಲ್-ಇಂದಬೆಟ್ಟು ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದ್ದರು. ಇನ್ನೂ ಹಲವೆಡೆ ರಸ್ತೆ ಕಿರಿದಾಗಿದ್ದು, ಅಪಘಾತಗಳೂ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಮತ್ತಷ್ಟು ಅಗಲಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

10 ಹೆಚ್ಚು ಊರುಗಳಿಗೆ ಸಂಪರ್ಕ

ಸುಮಾರು 10ಕಿಮೀ ವ್ಯಾಪ್ತಿಯ ಈ ರಸ್ತೆ ನಿಡಿಗಲ್‌ನ ಚಾಕೋಟೆ ಕಟ್ಟೆಯಿಂದ ಗುರಿಪಳ್ಳ, ಕನ್ಯಾಡಿ, ಮಂಜೊಟ್ಟಿ, ಸುರ್ಯ, ನಡ, ನಾವೂರು, ಇಂದಬೆಟ್ಟು, ಕೊಲ್ಲಿ, ಕಾಜೂರು, ಬಂಗಾಡಿ ಮೊದಲಾದ ಕಡೆ ಸಂಪರ್ಕಿಸುತ್ತದೆ. ಅಲ್ಲದೇ ಇದೇ ರಸ್ತೆಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳು, ಶಾಲಾ ವಾಹನಗಳು ಸಹಿತ ನೂರಾರು ವಾಹನಗಳು ಸಂಚರಿಸುತ್ತಿವೆ.

ಅಂಬಡಬೆಟ್ಟು ಬಳಿ ಸೇತುವೆ ನಿರ್ಮಾಣಕ್ಕೆ 2.50 ಕೋಟಿ ರೂ. ಅನುದಾನ ಮಂಜೂರಾಗಿದೆ. ಸದ್ಯವೇ ಇದರ ಟೆಂಡರ್ ಕರೆಯುವ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. ಬಕ್ಕಪ್ಪ, ಎಇಇ, ಪಿಡಬ್ಲ್ಯೂಡಿ ಬೆಳ್ತಂಗಡಿ

  • ನನೆಗುದಿಯಲ್ಲಿದೆ ದಶಕದ ಬೇಡಿಕೆ
  • ಅಭಿವೃದ್ಧಿ ತೇಪಗಳಿಗಷ್ಟೇ ಸೀಮಿತ
  • ರಸ್ತೆ ಅಗಲಿಸುವಂತೆ ಸ್ಥಳೀಯರ ಪಟ್ಟು
ಕಿರಿದಾಗಿರುವ ನಿಡಿಗಲ್-ಇಂದಬೆಟ್ಟು ರಸ್ತೆ
ಕಿರಿದಾಗಿರುವ ನಿಡಿಗಲ್-ಇಂದಬೆಟ್ಟು ರಸ್ತೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net