ಅಪಾಯ ಆಹ್ವಾನಿಸುತ್ತಿದೆ ಕಾಲುಸಂಕ

bridge
ಸಂಪೂರ್ಣ ಶಿಥಿಲಗೊಂಡಿರುವ ಕಾಲುಸಂಕ
Published on

ನರೇಂದ್ರ ಎಸ್. ಮರಸಣಿಗೆ ಹೆಬ್ರಿ

ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡ ತಿಂಗಳ ಸಂಪರ್ಕಿಸುವ ಕಾಲುಸಂಕ ಸಂಪೂರ್ಣ ಶಿಥಿಲಗೊಂಡಿದ್ದು, ಪಿಲ್ಲರ್‌ಗಳು ಬೀಳುವ ಅಪಾಯದಲ್ಲಿದೆ. 30 ವರ್ಷಗಳ ಹಿಂದೆ ಈ ಕಾಲು ಸಂಕ ನಿರ್ಮಿಸಲಾಗಿದ್ದು, ಏಕಕಾಲದಲ್ಲಿ ಒಂದು ದ್ವಿಚಕ್ರ ವಾಹನ ಸಂಚರಿಸಲು ಸಾಧ್ಯವಿದೆಯಷ್ಟೆ. 20 ಮನೆಗಳ ಮಂದಿ ಹೆಬ್ರಿ ಪೇಟೆ, ಶಾಲೆಗೆ ಹೋಗಲು ಇದೇ ಕಾಲು ಸಂಕ ಬಳಸುತ್ತಾರೆ.

ಡಿಪಿಆರ್‌ಗೆ ಅನುಮೋದನೆ

ಕರ್ನಾಟಕ ರೋಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಮಣ್ಣು ಪರೀಕ್ಷೆ ನಡೆಸಿ ಬಳಿಕ ಅನುಮೋದನೆಗೆ ಡಿಪಿಆರ್ ಕಳುಹಿಸಲಾಗಿತ್ತು. ಆದರೆ ಅನುದಾನ ಮಂಜೂರಾಗದೆ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿತ್ತು.

ಹತ್ತಿರದ ದಾರಿ

ಸೋಮೇಶ್ವರಕ್ಕೆ ಸುತ್ತು ಬಳಸಿ ಐದು ಆರು ಕಿಲೋಮೀಟರ್ ನಡೆದುಕೊಂಡು ಬರಬೇಕು. ಕಾಲುಸಂಕದ ಮೇಲೆ ಬಂದರೆ ಕೇವಲ 1.5 ಕಿಲೋ ಮೀಟರ್ ದೂರವಿದೆ. ಬಸ್ ಸೌಕರ್ಯ ಇರುವುದರಿಂದ ಅನೇಕ ಜನರಿಗೆ ಇದರ ಉಪಯೋಗ ಆಗುತ್ತದೆ.

ಪ್ಯಾರಾಪಿಟ್ ಇಲ್ಲದೆ ಅಪಾಯ

ಕಾಲುಸಂಕಗಳ ಎರಡೂ ಭಾಗಗಳಿಗೆ ಪ್ಯಾರಾಪಿಟ್ ಇಲ್ಲದಾಗಿದೆ. ರಭಸದ ಹರಿವಿನ ಸಂದರ್ಭ ಕಾಲುಸಂಕದ ಮೇಲೆಯೆ ನೀರು ರಭಸವಾಗಿ ಹರಿಯುತ್ತದೆ. ಪ್ಯಾರಾಪಿಟ್ ಇಲ್ಲದೇ ಸಂಚರಿಸುವುದೂ ಅಪಾಯವಾಗಿದೆ. ರಾತ್ರಿ ಸಂಚಾರವೂ ಇಲ್ಲಿ ಅಪಾಯಕಾರಿಯಾಗಿದೆ. ಪ್ರಸಕ್ತ ವರ್ಷ ರಭಸದ ಹರಿವಿನ ಕಾರಣದಿಂದ ನಾಲ್ಕು ಬಾರಿ ಕಾಲುಸಂಕದಲ್ಲಿ ಸಂಚಾರ ನಿಷೇಧಿಸಲಾಗಿತ್ತು.

ನಾಡ್ಪಾಲು ಗ್ರಾಮ ಪಂಚಾಯಿತಿ ವತಿಯಿಂದ ಬಂದ ಪತ್ರ ಪರಿಶೀಲಿಸಲಾಗುವುದು. ಇಲ್ಲಿ ಸೇತುವೆ ನಿರ್ಮಿಸಬೇಕಾದರೆ ವಿಶೇಷ ಅನುದಾನ ಕೇಳಬೇಕು. ಯಾವುದೇ ಅನುದಾನ ಸದ್ಯಕ್ಕೆ ಇಲ್ಲ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ.-ಡಾ.ಕೆ.ವಿದ್ಯಾಕುಮಾರಿ ಉಡುಪಿ ಜಿಲ್ಲಾಧಿಕಾರಿ

ಕೆಲವು ಸಮಯದ ಹಿಂದೆ ಸೇತುವೆಯ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಿ ಅನುಮೋದನೆಗೆ ಕಳಿಸಲಾಗಿತ್ತಾದರೂ ಅನುದಾನ ಮಂಜೂರಾಗಿಲ್ಲ. ಮಳೆಗಾಲದಲ್ಲಿ ಕಾಲುಸಂಕದ ಮೇಲೆ ಚಲಿಸುವುದು ಬಹಳ ಅಪಾಯಕಾರಿ. ಎರಡು ಭಾಗಕ್ಕೂ ಪ್ಯಾರಾಪಿಟ್ ಇಲ್ಲದ ರಕ್ಷಣೆ ಇಲ್ಲ. ಶೀಘ್ರವೇ ಸೇತುವೆ ನಿರ್ಮಾಣ ಆಗಬೇಕು. ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.-ದಿನೇಶ್ ಹೆಗ್ಡೆ, ನಾಡ್ಪಾಲು, ಗ್ರಾಪಂ ಸದಸ್ಯ

ಕಾಲುಸಂಕ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಪಿಲ್ಲರ್‌ಗಳು ಬೀಳುವ ಅಪಾಯದಲ್ಲಿವೆ. ಮಳೆಗಾಲದಲ್ಲಿ ಜೀವಭಯದಿಂದ ಸಂಚಾರ ಮಾಡುತ್ತೇವೆ. ದಯಮಾಡಿ ಸೇತುವೆ ನಿರ್ಮಿಸಿ ಕೊಡಿ.-ಸೂರ್ಯನಾರಾಯಣ ಶೆಟ್ಟಿ, ಬಡತಿಂಗಳೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net