

ವಿಜಯವಾಣಿ ಸುದ್ದಿಜಾಲ ಸುಳ್ಯ
ನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರು ಯೋಜನೆ ಅಮೃತ್ 2 ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ ನಗರ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆಯಿತು.
ನಪಂ ಅಧ್ಯಕ್ಷೆ ಶಶಿಕಲಾ ಎ.ನೀರಬಿದರೆ ಅಧ್ಯಕ್ಷತೆಯಲ್ಲಿ ನಡೆದ ಜನಪ್ರತಿನಿಧಿಗಳ, ಇಂಜಿನಿಯರ್ಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಯೋಜನೆಯ ಕಾಮಗಾರಿ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ರಸ್ತೆಗಳನ್ನು ಕಡಿದು ಹಾಕಿ, ಪೈಪ್ಲೈನ್ಗಳಿಗೆ ಹಾನಿ ಉಂಟಾಗಿ ಜನರಿಗೆ ಸಮಸ್ಯೆ ಉಂಟಾಗಿದೆ ಎಂದು ನಪಂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಸುಳ್ಯ ನಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಪೂರೈಕೆ ಯೋಜನೆಯಲ್ಲಿ ಪೈಪ್ ಅಳವಡಿಕೆಗೆ ರಸ್ತೆ ಅಗೆಯುತ್ತಿರುವುದರಿಂದ ಸಾರ್ವಜನಿಕರು ಹೈರಾಣರಾಗಿದ್ದಾರೆ. ಸುಳ್ಯ ಪಟ್ಟಣದಲ್ಲಿ ವಿವಿಧ ವಾರ್ಡ್ಗಳಲ್ಲಿ ಅಮೃತ್ ಯೋಜನೆ ಕಾಮಗಾರಿ ನಡೆಯುತ್ತಿದ್ದು, ನ.ಪಂ ಸದಸ್ಯರು ಹಾಗೂ ಆಡಳಿತವು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾಂಕ್ರೀಟ್ ರಸ್ತೆ, ಇಂಟರ್ಲಾಕ್, ಡಾಂಬರು ರಸ್ತೆ, ಹಾಲಿ ಇರುವ ಪೈಪ್ಲೈನ್ಗೆ ಹಾನಿ ಸೇರಿದಂತೆ ಎಲ್ಲವೂ ಅಸ್ತವ್ಯಸ್ತವಾಗಿದೆ ಎಂದು ಸದಸ್ಯರು ದೂರಿದರು.
ನಪಂ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್, ಧೀರಾ ಕ್ರಾಸ್ತಾ, ಶರೀಫ್ ಕಂಠಿ, ಬಾಲಕೃಷ್ಣ ರೈ, ರಾಜು ಪಂಡಿತ್, ನಪಂ ಉಪಾಧ್ಯಕ್ಷ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್., ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ಇಂಟರ್ಲಾಕ್ ಯಥಾಸ್ಥಿತಿಗೆ
ನಗರದಲ್ಲಿ ಅಗೆದಿರುವ ಕಾಂಕ್ರೀಟ್ ರಸ್ತೆಗಳಿಗೆ ಈಗಾಗಲೇ ಮರು ಕಾಂಕ್ರೀಟ್ ಅಳವಡಿಕೆ ಆರಂಭವಾಗಿದ್ದು, ಮಳೆಗೆ ಮುಂಚಿತವಾಗಿ ಪೂರ್ಣಗೊಳಿಸುತ್ತೆವೆ. ಡಾಂಬರು ರಸ್ತೆ ಮತ್ತು ಇಂಟರ್ಲಾಕ್ಗಳನ್ನು ಯಥಾಸ್ಥಿತಿಗೆ ತರಲಾಗುವುದು ಎಂದು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಜಯ್ ಹೇಳಿದರು.
ಕೂಡಲೇ ಸರಿಪಡಿಸಿ
ಕಾಮಗಾರಿ ನಡೆಸುವ ಸಂದರ್ಭ ನಗರ ಪಂಚಾಯಿತಿಗೆ ಮಾಹಿತಿ ನೀಡದೆ ಅಗೆಯುವ ಕಾರಣ ನೀರಿನ ಪೈಪುಗಳಿಗೆ ಹಾನಿ ಸಂಭವಿಸುತ್ತಿದ್ದು ನೀರು ಸರಬರಾಜಿಗೆ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ದೂರು ಬಂದಿದೆ. ಪೈಪ್ಗಳಿಗೆ ಹಾನಿ ಸಂಭವಿಸಿದರೆ ಕೂಡಲೇ ಸರಿಪಡಿಸಬೇಕು ಎಂದು ನಪಂ ಅಧ್ಯಕ್ಷೆ ಶಶಿಕಲಾ ನೀರಬಿದರೆ ಸೂಚಿಸಿದರು. ಕಾಮಗಾರಿಯನ್ನು ಶೀಘ್ರ ಪೂರ್ತಿ ಮಾಡಬೇಕು, ರಸ್ತೆ, ಪೈಪ್ಲೈನ್, ಇಂಟರ್ಲಾಕ್ ಸೇರಿದಂತೆ ಇತರ ಸಮಸ್ಯೆಗಳನ್ನು ಕೂಡಲೇ ಪರಿಹಾರ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.