More

    ಸೇತುವೆ ತಡೆಗೋಡೆಗೆ ಹಾನಿ, ಕಿಡಿಗೇಡಿಗಳಿಂದ ಕೃತ್ಯ,ವಾಹನ ಸವಾರಿಗೆ ಅಪಾಯ

    ವಿಜಯವಾಣಿ ಸುದ್ದಿಜಾಲ ಕೋಟ

    ಸಾಲಿಗ್ರಾಮ ಪಪಂ ವ್ಯಾಪ್ತಿಯ ಪಾರಂಪಳ್ಳಿ ಸಂಪರ್ಕಿಸುವ ಸೇತುವೆ ಮೇಲ್ಭಾಗದ ತಡೆಗೋಡೆಯನ್ನು ಕಿಡಿಗೇಡಿಗಳು ಭಾನುವಾರ ರಾತ್ರಿ ಪುಡಿಗೈದಿದ್ದು, ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

    ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡ ಪಾರಂಪಳ್ಳಿ ಹಾಗೂ ಕೋಡಿ ಸಂಪರ್ಕಿಸುವ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಆಗ್ರಹ ಕೇಳಿಬಂದಿತ್ತು. ಸೇತುವೆ ಹಾನಿಗೈದಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಟ್ಟಣ ಪಂಚಾಯಿತಿ ತಿಳಿಸಿದೆ.

    ಅಪಾಯಕಾರಿ ಸೇತುವೆ

    ಸೇತುವೆ ಶಿಥಿಲಾವಸ್ಥೆ ತಲುಪಿರುವ ಹಿನ್ನೆಲೆಯಲ್ಲಿ ಹೊಸ ಸೇತುವೆ ನಿರ್ಮಿಸಲು ವಾಹನ ಸವಾರರು, ಪಾದಚಾರಿಗಳು ಬಹಳಷ್ಟು ಬಾರಿ ಆಗ್ರಹಿಸಿದ್ದರು. ಅಲ್ಲದೆ ಸೇತುವೆ ಮೇಲ್ಭಾಗದಲ್ಲಿ ನಿರ್ಮಾಣವಾಗಿದ್ದ ಹೊಂಡಗಳನ್ನು ಆಟೋ ಚಾಲಕರು ಮುಚ್ಚಿದ್ದರು. ಇದೀಗ ಸೇತುವೆಗೆ ಹಾನಿಯಾಗಿದ್ದು, ವಾಹನ ಸಂಚಾರಕ್ಕೆ ಕುತ್ತು ಬರಲಿದೆ. ಶೀಘ್ರದಲ್ಲಿ ಸೇತುವೆ ಕಾಮಗಾರಿ ಆರಂಭಿಸಬೇಕು. ಅಲ್ಲಿವರೆಗೆ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪಪಂ ಸದಸ್ಯೆ ಅನುಸೂಯಾ ಹೇರ್ಳೆ, ರೇಖಾ ಕೇಶವ ಕರ್ಕೇರ, ಕರುಣಾಕರ ಪೂಜಾರಿ, ಬಿಜೆಪಿ ಮುಖಂಡರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಹೊಸ ಸೇತುವೆ ಪ್ರಕ್ರಿಯೆ

    ಹೊಸ ಸೇತುವೆ ನಿರ್ಮಾಣಕ್ಕೆ ಆಗಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕೇಂದ್ರ ಸರ್ಕಾರದ ಯೋಜನೆ ಮೂಲಕ 6 ಕೋಟಿ ರೂ. ಅನುದಾನ ಕಾಯ್ದಿರಿಸಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಂಜುನಾಥ್ ಮಾಹಿತಿ ನೀಡಿದ್ದಾರೆ. ಸಿಆರ್‌ಜಡ್ ತೊಡಕಿನಿಂದಾಗಿ ಕಾಮಗಾರಿ ವಿಳಂಬಗೊಂಡಿದೆ ಎನ್ನಲಾಗಿದೆ. ಸೇತುವೆ ಮೇಲ್ಭಾಗಕ್ಕೆ ತಾತ್ಕಾಲಿಕ ತಡೆಬೇಲಿ ನಿರ್ಮಿಸುವುದಾಗಿ ತಿಳಿಸಿದ್ದಾರೆ.

    See also  ನಿಖಿಲ್ ಕುಮಾರಸ್ವಾಮಿ ಬಿರುಸಿನ ಪ್ರಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts