

ಹೈದರಾಬಾದ್: ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಮೊನ್ನೆಯಷ್ಟೇ ಚಿತ್ರತಂಡ ತಿರುಪತಿಯಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಈವೆಂಟ್ ಸಹ ಮಾಡಿದೆ. ಈ ವೇಳೆ ಎಲ್ಲೆಡೆ ಜೈ ಶ್ರೀರಾಮ್ ಘೋಷಣೆ ಮೊಳಗಿತು. ಚಿತ್ರದ ಟ್ರೈಲರ್ ಸಹ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೆಲ್ಲದರ ನಡುವೆ ಆದಿಪುರುಷ್ ಸಿನಿಮಾಗೆ ಸಂಬಂಧಿಸಿದ ಸುಳ್ಳು ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದ್ದು, ಅದಕ್ಕೆ ಚಿತ್ರತಂಡವು ಕೂಡ ಪ್ರತಿಕ್ರಿಯಿಸಿದೆ.
ಧರ್ಮ ಮತ್ತು ಜಾತಿಗೆ ಆದಿಪುರುಷ್ ಸಿನಿಮಾವನ್ನು ಲಿಂಕ್ ಮಾಡಿ ನಕಲಿ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಪೋಸ್ಟ್ನ ಸಾರಾಂಶ ಹೀಗಿದೆ. ಆದಿಪುರುಷ್ ಬಿಡುಗಡೆಯಾಗುವ ಚಿತ್ರಮಂದಿರಗಳಿಗೆ ದಲಿತರಿಗೆ ಅನುಮತಿ ನೀಡುವುದಿಲ್ಲ. ರಾಮಾಯಣ ಪಾರಾಯಣ ನಡೆಯುವ ಸ್ಥಳ ಪವಿತ್ರವಾಗಿರಬೇಕು ಎಂಬುದು ನಮ್ಮ ನಂಬಿಕೆಯಾಗಿದ್ದು, ಈ ನಂಬಿಕೆಯನ್ನು ಗೌರವಿಸಿ ಪ್ರಭಾಸ್ ರಾಮನ ಪಾತ್ರ ಮಾಡುತ್ತಿರುವ ಚಿತ್ರಮಂದಿರಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ ಮತ್ತು ಭಾರೀ ಬಜೆಟ್ನಲ್ಲಿ ಧರ್ಮಕ್ಕಾಗಿ ನಿರ್ಮಿಸಲಾಗಿರುವ ಸಿನಿಮಾವನ್ನು ಪ್ರತಿಯೊಬ್ಬ ಹಿಂದು ಸಹ ನೋಡಬೇಕೆಂದು ಕರೆ ಕೊಡಲಾಗಿದೆ. ಈ ಪೋಸ್ಟ್ ಅನ್ನು ಯುವಿ ಕ್ರಿಯೇಷನ್ಸ್, ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಹಾಗೂ ಆದಿಪುರುಷ್ ತಂಡವೇ ರಚಿಸಿದೆ ಎಂದು ಪೋಸ್ಟ್ನಲ್ಲಿ ವಾದಿಸಲಾಗಿದೆ.
ಆದರೆ, ಈ ಪೋಸ್ಟ್ ಆದಿಪುರುಷ್ ಚಿತ್ರತಂಡದ ಗಮನಕ್ಕೆ ಬಂದಿದ್ದು, ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದೆ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಇಂಥದ್ದನ್ನು ಯಾರು ನಂಬಬೇಡಿ. ಆದಿಪುರುಷ್ ಸಿನಿಮಾ ಹೆಸರಿನಲ್ಲಿರುವ ಈ ಪೋಸ್ಟ್ ಜನರ ದಾರಿ ತಪ್ಪಿಸುವಂತಿದೆ. ಆದಿಪುರುಷ್ ಸಿನಿಮಾ ತಂಡವು ಯಾವುದೇ ಜಾತಿ, ಬಣ್ಣ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯವಿಲ್ಲದೆ ಸಮಾನತೆಗಾಗಿ ದೃಢವಾಗಿ ನಿಂತಿದೆ ಎಂದು ಸ್ಪಷ್ಟನೆ ನೀಡಿದೆ.
ಸಿನಿಮಾ ವಿಚಾರಕ್ಕೆ ಬಂದರೆ, ಆದಿಪುರುಷ್ ಸಿನಿಮಾ ರಾಮಾಯಣ ಆಧಾರಿತ ಸಿನಿಮಾ ಆಗಿದೆ. ಪ್ರಭಾಸ್ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ, ಕೃತಿ ಸನೋನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ರಾವಣ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಈ ಸಿನಿಮಾ ಜೂನ್ 16ರಂದು ವಿಶ್ವದಾದ್ಯಂತ ತೆರೆಕಾಣಲಿದೆ. (ಏಜೆನ್ಸೀಸ್)