

ಹೈದರಾಬಾದ್: ಮನೆ ಬಳಿ ಸಾವಾಗಿದೆ. ಶವ ತೆಗೆಯುವವರೆಗೆ ಸ್ವಲ್ಪ ನಿಲ್ಲಿ ಎಂದು ಮರಳು ಸಾಗಿಸುತ್ತಿದ್ದ ಲಾರಿಯನ್ನು ತಡೆದಿದ್ದೇ ಆತನ ತಪ್ಪಾಯಿತು. ಆ ದಲಿತ ಯುವಕ ಠಾಣೆಯಲ್ಲಿ ಇನ್ನಿಲ್ಲದ ಹಿಂಸೆ ಅನುಭವಿಸಬೇಕಾಯಿತು.
ಸೀತಾನಗರಂ ಪೊಲೀಸ್ ಠಾಣೆ ವ್ಯಾಪ್ತಿಯ ವೆಡಲಪಲ್ಲಿ ಗ್ರಾಮದಲ್ಲಿ ಮರಳು ವರಪ್ರಸಾದ್ ಹಾಗೂ ಇತರ ಮೂವರ ಸೇರಿ ಮರಳು ಲಾರಿಯನ್ನು ತಡೆದು ನಿಲ್ಲಿಸಿದ್ದರು. ಆ ಮರಳು ಲಾರಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ನಾಯಕನಿಗೆ ಸೇರಿದ್ದಾಗಿತ್ತು. ಹೀಗಾಗಿ ಆತನೇ ಸ್ಥಳಕ್ಕೆ ಬಂದು ಗದ್ದಲ ನಡೆಸಿದ್ದಾನೆ. ದಾರಿ ಬಿಡುವಂತೆ ಧಮ್ಕಿ ಹಾಕಿದ್ದಾನೆ.
ಮರುದಿನ ಗ್ರಾಮಕ್ಕೆ ಬಂದ ಎಸ್ಐ ಶೇಖ್ ಫಿರೋಜ್ ಶಾ ಹಾಗೂ ಪೊಲೀಸರ ವರಪ್ರಸಾದ್ನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಭಾರಿ ಹಿಂಸೆ ನೀಡಿದ್ದಾರೆ. ಬೆಲ್ಟ್ನಿಂದ ಥಳಿಸಿದ್ದಾರೆ. ಕ್ಷೌರಿಕನನ್ನು ಕರೆಯಿಸಿ ನನ್ನ ತಲೆ ಬೋಳಿಸಿದ್ದಾರೆ. ಮೀಸೆಯನ್ನು ಕತ್ತರಿಸಿದ್ದಾರೆ ಎಂದು ವರಪ್ರಸಾದ್ ಆರೋಪಿಸಿದ್ದಾರೆ.
ಪೊಲೀಸರ ಕ್ರಮಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಎಸ್ಐ ಹಾಗೂ ಮತ್ತೊಬ್ಬ ಪೇದೆ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದ ಇಬ್ಬರನ್ನೂ ವಜಾ ಮಾಡಲಾಗಿದೆ. ಜತೆಗೆ, ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ಅಕ್ರಮ ಮರಳು ಸಾಗಣೆ ವಿರುದ್ಧ ಸಿಡಿದು ನಿಂತಿದ್ದಕ್ಕೆ ದಲಿತನ ಮೇಲೆ ದೌರ್ಜನ್ಯ ಎಸಗಲಾಗಿದೆ. ಪೊಲೀಸರು ಆಡಳಿತಾರೂಢ ಪಕ್ಷದ ನಾಯಕರ ಕೈಗೊಂಬೆಗಳಾಗಿ ವರ್ತಿಸುವುದು ಬೇಡ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಟೀಕಿಸಿದ್ದಾರೆ.