

ನವದೆಹಲಿ: ದೇಶದ ಪ್ರತಿಷ್ಠಿತ ಸಮೂಹ ಸಂಸ್ಥೆಯಾಗಿರುವ ಟಾಟಾ ಟ್ರಸ್ಟ್ಗಳ ಅಧ್ಯಕ್ಷರಾಗಿ ಟಾಟಾ ಕುಟುಂಬದ ಉತ್ತರಾಧಿಕಾರಿಯೇ ಆಗಬೇಕೆಂದೇನಿಲ್ಲ. ಆ ಹುದ್ದೆಯನ್ನು ಬೇರೆಯವರು ವಹಿಸಿಕೊಳ್ಳಬಹುದು...!
ಈ ಮಾತನ್ನು ಸ್ವತಃ ರತನ್ ಟಾಟಾ ಅವರೇ ಹೇಳಿದ್ದಾರೆ. ಸದ್ಯಕ್ಕೆ ಟಾಟಾ ಟ್ರಸ್ಟ್ಗಳ ಅಧ್ಯಕ್ಷನಾಗಿದ್ದೇನೆ. ಬೇರೆ ಯಾರಾದರೂ ಆಗಬಹುದು. ಭವಿಷ್ಯದಲ್ಲಿ ಟಾಟಾ ಅಡ್ಡಹೆಸರನ್ನು ಹೊಂದಿಲ್ಲದವರೂ ಆಗಬಹುದು. ವ್ಯಕ್ತಿಯ ಬದುಕು ಕೊನೆಗೊಳ್ಳುತ್ತದೆ. ಆದರೆ, ಈ ಸಂಸ್ಥೆಗಳು ಮುಂದುವರಿಯುತ್ತವೆ ಎಂದು ರತನ್ ಟಾಟಾ ಹೇಳಿದ್ದಾರೆ.
ಟಾಟಾ ಕಂಪನಿಗಳ ಮೂಲವಾಗಿರುವ ಟಾಟಾ ಸನ್ಸ್ನ ಅಧ್ಯಕ್ಷ ಹುದ್ದೆಯನ್ನು 2012ರಲ್ಲಿಯೇ ರತನ್ ಟಾಟಾ ತೊರೆದಿದ್ದಾರೆ. 50 ವರ್ಷಗಳಿಂದ ಅವರು ಈ ಹುದ್ದೆಯಲ್ಲಿದ್ದರು. ಸದ್ಯ ಟಾಟಾ ಸನ್ಸ್ನ ಗೌರವ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಟಾಟಾ ಸನ್ಸ್ ಅಧ್ಯಕ್ಷ ಸ್ಥಾನವೂ ಸೇರಿ ಸಂಸ್ಥೆಯ ಮೇಲೆ ಟಾಟಾ ಕುಟುಂಬ ಯಾವುದೇ ಪಟ್ಟಭದ್ರ ಅಧಿಕಾರ ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲೂ ಸ್ಪಷ್ಟಪಡಿಸಿದೆ. ಸೈರಸ್ ಮಿಸ್ತ್ರಿ ಒಡೆತನದ ಸೈರಸ್ ಇನ್ವೆಸ್ಟ್ಮೆಂಟ್ಸ್ಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಹೇಳಿಕೆ ಸಲ್ಲಿಸಲಾಗಿದೆ.
ಭವಿಷ್ಯದಲ್ಲಿ ಟಾಟಾ ಟ್ರಸ್ಟ್ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಾಂಸ್ಥೀಕರಣ ಯೋಜನೆಗಳನ್ನು ರತನ್ ಟಾಟಾ ಹೊಂದಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಟಾಟಾ ಸನ್ಸ್ ಹಾಗೂ ಟಾಟಾ ಟ್ರಸ್ಟ್ ಎರಡಕ್ಕೂ ಅಧ್ಯಕ್ಷರಾದ ಕೊನೆಯ ವ್ಯಕ್ತಿ ರತನ್ ಟಾಟಾ ಆಗಿದ್ದಾರೆ. ಸದ್ಯ ಎನ್. ಚಂದ್ರಶೇಖರ್ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದಾರೆ.