

ಬೆಳ್ತಂಗಡಿ(ದಕ್ಷಿಣ ಕನ್ನಡ): ವಿಷಯುಕ್ತ ಅಣಬೆ ಪದಾರ್ಥ ಸೇವಿಸಿ ತಂದೆ-ಮಗ ಇಡೀ ರಾತ್ರಿ ನರಳಾಡಿ ಮನೆಯ ಅಂಗಳದಲ್ಲೇ ಪ್ರಾಣಬಿಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ಸಂಭವಿಸಿದೆ. ಕಡುಬಡತನದಲ್ಲೇ ಬೇಯುತ್ತಿದ್ದ ಈ ಕುಟುಂಬದಲ್ಲಿ ದುರಂತದ ಸರಮಾಲೆಗಳೇ ಸಂಭವಿವೆ. ಇವರ ಕರುಣಾಜನಕ ಕಥೆ ಕೇಳಿದ್ರೆ ಮನಕಲಕುತ್ತೆ...
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಮಿಯ್ಯಾರು ಸಮೀಪದ ಕೇರಿಮಾರು ಗ್ರಾಮದಲ್ಲಿ 80 ವರ್ಷದ ಗುರುವ ಎಂಬುವವರು ಇಬ್ಬರು ಪುತ್ರರಾದ ಕರ್ತ ಹಾಗೂ ಓಡಿಯಪ್ಪ ಎಂಬುವವರ ಜತೆ ವಾಸವಿದ್ದರು. ಸೋಮವಾರ(ನ.21) ಕಾಡಿನಿಂದ ತಿಳಿಯದೆ ವಿಷಪೂರಿತ ಅಣಬೆಯನ್ನು ತಂದು ಅಡುಗೆ ಮಾಡಿಕೊಂಡು ತಂದೆ ಗುರುವ- ಮಗ ಓಡಿಯಪ್ಪ ರಾತ್ರಿ ಸೇವಿಸಿದ್ದರು. ಬಳಿಕ ಇಬ್ಬರೂ ಅಸ್ವಸ್ಥಗೊಂಡಿದ್ದು, ವಾಂತಿ-ಭೇದಿ ಆರಂಭವಾಗಿದ್ದು, ನೆರವಿಗಾಗಿ ಕೂಗಿಕೊಂಡಿದ್ದಾರೆ. ತೀರಾ ಹತ್ತಿರದಲ್ಲಿ ಯಾವುದೇ ಮನೆ ಇಲ್ಲದ ಕಾರಣ ನೆರವು ದೊರೆತಿಲ್ಲ. ಮೇಲಾಗಿ ಓಡಿಯಪ್ಪ ಮಾನಸಿಕ ಅಸ್ವಸ್ಥನೂ ಆಗಿದ್ದರಿಂದ, ಎಂದಿನಂತೆ ಕೂಗುತ್ತಿರಬಹುದು ಎಂದು ಸ್ಥಳೀಯರೂ ನಿರ್ಲಕ್ಷಿಸಿರಬಹುದು ಎನ್ನಲಾಗಿದೆ. ಈ ವೇಳೆ ಮತ್ತೊಬ್ಬ ಪುತ್ರ ಕರ್ತ ಮನೆಯಲ್ಲಿ ಇರಲಿಲ್ಲ. ನೋವಿನಿಂದ ನರಳಾಡಿ ತಂದೆ-ಮಗ ಇಬ್ಬರೂ ಮನೆ ಅಂಗಳದಲ್ಲಿ ಹೊರಳಾಡಿ ಪ್ರಾಣಬಿಟ್ಟಿದ್ದಾರೆ. ಮೈಪೂರ್ತಿ ಮಣ್ಣು ಅಂಟಿಕೊಂಡಿತ್ತು. ಮಂಗಳವಾರ ಬೆಳಗ್ಗೆ ಮನೆಗೆ ಮತ್ತೊಬ್ಬ ಮಗ ತರ್ಕ ಬಂದಾಗ ಮನೆ ಅಂಗಳದಲ್ಲಿ ಇಬ್ಬರ ಮೃತದೇಹಗಳು ಬಿದ್ದಿದ್ದವು.
ದುರಂತದ ಸರಮಾಲೆ: ಗುರುವ ಅವರ ಹಿರಿಯ ಪುತ್ರ ಕರ್ತನ ಪತ್ನಿ ನಾಲ್ಕನೇ ಹೆರಿಗೆ ಸಂದರ್ಭ ಮೃತಪಟ್ಟಿದ್ದರು. ಗುರುವ ಅವರ ಪುತ್ರಿ ಡೀಕಮ್ಮ ಕೆಲವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದು, ಸರಿಯಾದ ಚಿಕಿತ್ಸೆ ದೊರಕದೆ ಕೊನೆಯುಸಿರೆಳೆದಿದ್ದರು. ಕೂಲಿ ಕೆಲಸಕ್ಕೆ ಹೋಗಿ ಕುಟುಂಬವನ್ನು ಸಲಹುತ್ತಿದ್ದ ಗುರುವ ಪತ್ನಿ ಕುಚ್ಚ ಅವರು ವರ್ಷದ ಹಿಂದೆ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದು, ಧರ್ಮಸ್ಥಳದಲ್ಲಿರುವ ಮೊಮ್ಮಕ್ಕಳ ಮನೆಯಲ್ಲಿದ್ದಾರೆ. ಈಗ ಮೃತಪಟ್ಟಿರುವ ಗುರುವ ಮತ್ತು ಓಡಿ ಇಬ್ಬರೂ ಕೆಲಸ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಪಡಿತರ ಅಕ್ಕಿಯನ್ನು ತಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.
ನಿರ್ಲಕ್ಷ್ಯಕ್ಕೊಳಗಾದ ಕುಟುಂಬ: ಪರಿಶಿಷ್ಟ ಜಾತಿಗೆ ಸೇರಿದ ಈ ಕುಟುಂಬ ಬಡತನ, ಸರಿಯಾಗಿ ದೊರಕದ ಶಿಕ್ಷಣ, ಅನಾರೋಗ್ಯ, ಮದ್ಯಪಾನ ಮತ್ತಿತರ ಕಾರಣಗಳಿಂದ ಸಮಸ್ಯೆಗೆ ಸಿಲುಕಿತ್ತು. ಹಿಂದೆ ಗುಡಿಸಲಿನಂತಿದ್ದ ಮನೆಯಲ್ಲಿದ್ದವರು ಕೆಲವರ್ಷಗಳ ಹಿಂದೆ ಸಮೀಪವೇ ಸಿಮೆಂಟ್ ಬ್ಲಾಕ್, ಶೀಟ್ ಅಳವಡಿಸಿದ ಬೇರೆ ಮನೆ ನಿರ್ಮಿಸಿ ವಾಸವಾಗಿದ್ದರು. ಈ ಮನೆಗೆ ವಿದ್ಯುತ್, ಗ್ಯಾಸ್ ಯಾವುದೂ ಇಲ್ಲ. ಮೃತಪಟ್ಟ ಇಬ್ಬರಲ್ಲೂ ಮೊಬೈಲ್ ಕೂಡ ಇರಲಿಲ್ಲ. ಕನಿಷ್ಠ ಮೂಲಸೌಕರ್ಯವೂ ಇಲ್ಲದ ಶೋಚನೀಯ ಸ್ಥಿತಿಯಲ್ಲಿ ವಾಸವಿದ್ದ ಕುಟುಂಬ ಆಡಳಿತದ ನಿರ್ಲಕ್ಷ್ಯಕ್ಕೆ ಜೀವಂತ ಸಾಕ್ಷಿ.
ಮಾನಸಿಕ ಅಸ್ವಸ್ಥ: ಮೃತಪಟ್ಟ ಓಡಿಯಪ್ಪ ಅವಿವಾಹಿತನಾಗಿದ್ದು, ಹಲವು ವರ್ಷಗಳ ಹಿಂದೆಯೇ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಒಬ್ಬಂಟಿಯಾಗಿ ಸಿಕ್ಕರೆ ಹೆದರಿಸುತ್ತಿದ್ದುದರಿಂದ ಊರಿನ ಮಹಿಳೆಯರು, ಮಕ್ಕಳು ಅವನನ್ನು ಕಂಡರೆ ಹೆದರುತ್ತಿದ್ದರು. ಎಲ್ಲೇ ಹೋಗುವುದಿದ್ದರೂ ನಡೆದುಕೊಂಡೇ ಹೋಗುತ್ತಿದ್ದ. ಊರಿನ ಯಾರ ಜತೆಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಮಾನಸಿಕ ಸಮಸ್ಯೆಗೆ ಸೂಕ್ತ ಚಿಕಿತ್ಸೆಯನ್ನೂ ಪಡೆದಿರಲಿಲ್ಲ.
ಹಿರಿಯ ಪುತ್ರ ಬಚಾವ್: ಸದ್ಯ ಮನೆಯಲ್ಲಿ ದುಡಿಮೆಗೆ ಹೋಗುತ್ತಿದ್ದುದು ಕರ್ತ ಮಾತ್ರ. ಆತ ಮದ್ಯಪಾನಿಯಾಗಿದ್ದು, ಸೋಮವಾರ ಸಂಜೆ 6 ಗಂಟೆ ಹೊತ್ತಿಗೆ ಮನೆಯಿಂದ ಮೂರ್ನಾಲ್ಕು ಕಿ.ಮೀ. ದೂರದಲ್ಲಿರುವ ಬೊಳ್ಮನಾರು ಎಂಬಲ್ಲಿ ಪಾನಮತ್ತನಾಗಿ ರಸ್ತೆ ಬದಿ ಬಿದ್ದವನಿಗೆ ಎಚ್ಚರವಾಗಿದ್ದು ಮಂಗಳವಾರ ಬೆಳಗ್ಗೆಯೇ. ಎದ್ದವ ಮನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಕರ್ತ ರಾತ್ರಿಯೇ ಮನೆಗೆ ಹೋಗುತ್ತಿದ್ದರೆ ತಂದೆ ಹಾಗೂ ಸಹೋದರನ ಜತೆ ಊಟ ಮಾಡುತ್ತಿದ್ದ. ಮನೆಗೆ ಹೋಗದ ಕಾರಣ ಉಳಿದಿದ್ದಾನೆ.
ಅಣಬೆಗಳನ್ನು ಅವುಗಳ ಬಣ್ಣಗಳ ಮೂಲಕ ಗುರುತಿಸಿ ಉಪಯೋಗಿಸಲಾಗುತ್ತದೆ. "ಅಮನಿಟ'' ಎಂಬ ಜಾತಿಯ ಅಣಬೆಗಳು ಕಾಡಲ್ಲಿ ಸಾಮಾನ್ಯವಾಗಿ ಸಿಗುತ್ತವೆ. ಇವು ತೀವ್ರ ವಿಷಕಾರಿ ಹಾಗೂ ಸೇವಿಸಿದರೆ ಸಾವು ಸಂಭವಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಆಹಾರಕ್ಕೆ ಬಳಸುವ "ಪ್ಲೀವ್ರೋಟಸ್'' ಜಾತಿ ಅಣಬೆಗಳನ್ನು ಎರಡ್ಮೂರು ದಿನ ಯಾವುದೇ ಮುಂಜಾಗ್ರತೆ ವಹಿಸದೆ ಇಟ್ಟು ಸೇವಿಸಿದರೆ, ಇದರಿಂದಲೂ ತೀವ್ರ ಅನಾರೋಗ್ಯ ಬರುವ ಸಂಭವ ಇದೆ.
| ಡಾ.ಕುಮಾರ್ ಹೆಗ್ಡೆ ಸಸ್ಯಶಾಸ್ತ್ರ, ಉಜಿರೆ ಎಸ್ಡಿಎಂ ಕಾಲೇಜು