

ಬೆಂಗಳೂರು: 'ನಿಮ್ಮ ಕಥೆ- ಚಿತ್ರಕಥೆ- ಸಂಭಾಷಣೆ ಎಲ್ಲ ನಮಗೆ ಅಗತ್ಯವಿಲ್ಲ. ಕೇಳಿದ ಪ್ರಶ್ನೆಗಳಿಗಷ್ಟೇ ಉತ್ತರ ಕೊಡಿ. ನೀವು ಕೊಟ್ಟ ಉತ್ತರವನ್ನು ದಾಖಲು ಮಾಡಿಕೊಳ್ಳುತ್ತೇನೆ'.... ಇದು ಚುನಾವಣಾ ತಕರಾರು ಅರ್ಜಿಯ ಪಾಟಿಸವಾಲಿನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಪದೇಪದೆ ಇನ್ನಿಲ್ಲದ ವಿವರಣೆ ನೀಡಲು ಮುಂದಾದ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹೈಕೋರ್ಟ್ ಚಾಟಿ ಬೀಸಿದ ರೀತಿ ಇದು.
ನಾಮಪತ್ರ ಸಲ್ಲಿಸುವ ವೇಳೆ ಆದಾಯ ಹಾಗೂ ಆಸ್ತಿ ವಿವರ ಮುಚ್ಚಿಟ್ಟು ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಪ್ರಜ್ವಲ್ ರೇವಣ್ಣ ಚುನಾವಣಾ ಅಕ್ರಮವೆಸಗಿದ್ದಾರೆ. ಆದ್ದರಿಂದ, ಅವರ ಆಯ್ಕೆ ಅಸಿಂಧುಗೊಳಬೇಕೆಂದು ಎಂದು ಕೋರಿ ಎ.ಮಂಜು ಹಾಗೂ ಜಿ.ದೇವರಾಜೇಗೌಡ ಸಲ್ಲಿಸಿರುವ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು, '2019ರ ಏ.17ರಂದು ಹೊಳೆನರಸೀಪುರದ ಚನ್ನಾಂಬಿಕಾ ಥಿಯೇಟರ್ ಒಳಗೆ ನಿಂತಿದ್ದ ಇನ್ನೋವಾ ಕಾರಿನಲ್ಲಿದ್ದ 1.20 ಲಕ್ಷ ಮೊತ್ತವನ್ನು ಚುನಾವಣಾ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದ್ದು ಹೌದಲ್ಲವೇ?' ಎಂದು ಪ್ರಜ್ವಲ್ ರೇವಣ್ಣ ಅವರನ್ನು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಪ್ರಜ್ವಲ್, 'ಇಲ್ಲ.. ಅದು ನನ್ನ ತಂದೆಯ ಎಸ್ಕಾರ್ಟ್ನವರಿಗೆ ಸೇರಿದ ಸರ್ಕಾರಿ ಕಾರು ಆಗಿತ್ತು. ಆಗ ತಂದೆ ಲೋಕೋಪಯೋಗಿ ಸಚಿವರಾಗಿದ್ದರು. ಕಾರು ಥಿಯೇಟರ್ ಒಳಗೆ ನಿಂತಿರಲಿಲ್ಲ. ಕಾಂಪೌಂಡ್ ಒಳಗೆ ನಿಂತಿತ್ತು. ಅವತ್ತು ಆ ಹಣವನ್ನು ಐಟಿ(ಆದಾಯ ತೆರಿಗೆ) ಅಧಿಕಾರಿಗಳೇ ತಂದು ಕಾರಿನಲ್ಲಿ ದುರುದ್ದೇಶದಿಂದ ಇರಿಸಿ ದೂರು ದಾಖಲಿಸಿದ್ದರು ಎಂದರು. ನಂತರ ಅದಕ್ಕೆ ತದ್ವಿರುದ್ಧವಾಗಿ ಅಷ್ಟಕ್ಕೂ ಆ ಹಣವನ್ನು ನನ್ನ ತಾಯಿ ಹಸುಗಳಿಗೆ ಬೂಸಾ ತರಲು ನಮ್ಮ ಮನೆಯ ಸೇವಕನಿಗೆ ನೀಡಿದ್ದರು. ಈಗಾಗಲೇ ಈ ದೂರಿನ ತನಿಖೆ ನಡೆದಿದ್ದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ' ಎಂದರು.
ಇದರಿಂದ ಬೇಸರಗೊಂಡ ನ್ಯಾಯಮೂತಿರ್ಗಳು, 'ರ್ರೀ, ನಿಮ್ಮ ಕಥೆ- ಚಿತ್ರಕಥೆ- ಸಂಭಾಷಣೆ ಎಲ್ಲ ನಮಗೆ ಬೇಡ. ವಕೀಲರು ಕೇಳಿದ ಪ್ರಶ್ನೆಗಷ್ಟೇ ಹೌದು ಅಥವಾ ಇಲ್ಲ ಎಂದು ಉತ್ತರಿಸಿ. ನೀವು ನೀಡಿದ ಉತ್ತರವನ್ನು ದಾಖಲು ಮಾಡಿಕೊಳ್ಳುತ್ತೇನೆ' ಎಂದರು.
ಪ್ರಜ್ವಲ್ ರೇವಣ್ಣ ಕೆಲವೊಂದು ಪ್ರಶ್ನೆಗಳಿಗೆ, 'ಇದು ನನಗೆ ಗೊತ್ತಿಲ್ಲ. ನನ್ನ ಲೆಕ್ಕಪರಿಶೋಧಕರು ಹಾಗೂ ಬ್ಯಾಂಕ್ ಅಧಿಕಾರಿಗಳಿಂದ ವಿವರಣೆ ಪಡೆದುಕೊಂಡು ಬಂದು ಉತ್ತರಿಸುತ್ತೇನೆ' ಎಂದು ತಿಳಿಸಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂತಿರ್ಗಳು, 'ನೀವು ಮನೆಗೆ ಹೋಗಿ ನಿಮ್ಮ ಅಮ್ಮನ ಬಳಿ ಉತ್ತರ ಪಡೆದು ಬಂದು ತಿಳಿಸುತ್ತೇನೆ ಎಂದು ಮಗುವಿನ ರೀತಿಯಲ್ಲಿ ಹೇಳುತ್ತಿದ್ದೀರಲ್ಲ. ಇದು ಪರೀಕ್ಷೆ ಇದ್ದಂತೆ. ಸರಿಯಾಗಿ ಉತ್ತರ ನೀಡಬೇಕು ಎಂದು ತಾಕೀತು ಮಾಡಿದರಲ್ಲದೆ, ದಿನದ ಕಲಾಪದ ಅವಧಿ ಮೀರಿದ ಕಾರಣ ವಿಚಾರಣೆಯನ್ನು ನ.25ಕ್ಕೆ ಮುಂದೂಡಿದರು.