ಸಂಪಾದಕೀಯ: ಅಭಿವೃದ್ಧಿಯ ಹೆಜ್ಜೆ; ಗಣರಾಜ್ಯೋತ್ಸವಕ್ಕೆ ಆತ್ಮಾವಲೋಕನ

748465
Published on

ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಈ ಬಾರಿಯ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮ ವಿಶಿಷ್ಟವಾಗಿರಲಿದೆ. ಪ್ರತಿ ವರ್ಷದಂತೆ ಪ್ರಧಾನಿಗಳು ಅಮರಜ್ಯೋತಿ ಗೌರವ ಸಲ್ಲಿಸಲಿದ್ದಾರೆ. ರಾಷ್ಟ್ರಪತಿಗಳಿಂದ ಧ್ವಜಾರೋಹಣ ನೆರವೇರಲಿದೆ. ಇದರೊಂದಿಗೆ ಕೆಲವು ವಿಶೇಷ ಅತಿಥಿಗಳು ಈ ಕಾರ್ಯಕ್ರಮದ ಮುಂದಿನ ಸಾಲುಗಳನ್ನು ಅಲಂಕರಿಸಲಿದ್ದಾರೆ. ಸಾಮಾನ್ಯವಾಗಿ ಗಣ್ಯಾತಿಗಣ್ಯರಿಗೆ ಮೀಸಲಾಗಿರುತ್ತಿದ್ದ ಈ ಕುರ್ಚಿಗಳಲ್ಲಿ ಪೌರ ಕಾರ್ವಿುಕರು, ಬೀದಿ ವ್ಯಾಪಾರಿಗಳು, ರಿಕ್ಷಾವಾಲಾಗಳು, ತರಕಾರಿ ಮಾರುವವರು ಇರಲಿದ್ದಾರೆ. ವಿಐಪಿಗಳ ಬದಲಾಗಿ ಶ್ರಮಿಕರಿಗೆ ಕಾರ್ಯಕ್ರಮದಲ್ಲಿ ಆದ್ಯತೆ ನೀಡುವ ಕ್ರಮವು ‘ಜನರ ಭಾಗಿದಾರಿಕೆ’ ಎಂಬ ಈ ಬಾರಿಯ ಗಣರಾಜ್ಯೋತ್ಸವ ಧ್ಯೇಯವನ್ನು ಬಿಂಬಿಸುವ ಮಹತ್ವದ ನಡೆಯಾಗಿದೆ.

ಬ್ರಿಟಿಷರಿಂದ ಸ್ವಾತಂತ್ರ್ಯ ದೊರೆತು 75 ವರ್ಷಗಳು ಪೂರ್ಣಗೊಂಡಿದ್ದರೆ, ಸುಗಮ ಆಡಳಿತಕ್ಕಾಗಿ ಸಂವಿಧಾನವನ್ನು ಅಂಗೀಕರಿಸಿ 73 ವರ್ಷಗಳು ತುಂಬುತ್ತವೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳು ವಿಶೇಷವಾಗಿ ಪಾಶ್ಚಿಮಾತ್ಯರು ಹಿಂದೂಸ್ತಾನದ ಸಮಗ್ರತೆ, ಅಖಂಡತೆ, ಏಳ್ಗೆಯ ಬಗೆಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಹಲವು ಧರ್ಮ, ಮತ, ಭಾಷೆ, ಪ್ರಾಂತಗಳ ವಿವಿಧತೆಗಳ ನಡುವೆ ಸಮನ್ವಯ ಸಾಧಿಸಿ ಅಖಂಡ ರಾಷ್ಟ್ರವಾಗಿ ಉಳಿದುಕೊಳ್ಳುವುದು ಸವಾಲಿನ ಸಂಗತಿಯಾಗಿತ್ತು. ಈ ಸವಾಲನ್ನು ಸ್ವೀಕರಿಸಿದ ನಮ್ಮ ನಾಯಕರು ದೇಶದ ಅಭಿವೃದ್ಧಿಗಾಗಿ ಕ್ರಮಗಳನ್ನು ಕೈಗೊಂಡರು. ಇದರಲ್ಲಿ 1950ರಲ್ಲಿ ಸಂವಿಧಾನವನ್ನು ಅಂಗೀಕರಿಸಿ ಭಾರತವನ್ನು ಸಾರ್ವಭೌಮ ಗಣರಾಜ್ಯವಾಗಿ ಅಧಿಕೃತವಾಗಿ ಘೋಷಿಸಿದ್ದು ಮಹತ್ವದ್ದಾಗಿದೆ. ಪ್ರಸ್ತುತ ಭಾರತವು ಜಗತ್ತಿನಲ್ಲಿಯೇ ಅತಿದೊಡ್ಡ ಹಾಗೂ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪುಗೊಂಡಿದೆ.

ಬ್ರಿಟಿಷರ ಆಡಳಿತಕ್ಕಿಂತ ಮೊದಲು ಭಾರತ ಉಪಖಂಡವು ಸಂಪದ್ಭರಿತ ಪ್ರದೇಶವಾಗಿತ್ತು. 200 ವರ್ಷ ನಮ್ಮನ್ನಾಳಿದ ಬ್ರಿಟಿಷರು ನಮ್ಮ ಸಂಪತ್ತನ್ನು ಲೂಟಿ ಮಾಡಿದರು. ಆದರೆ, ಬ್ರಿಟಿಷರನ್ನೇ ನಾವು ಈಗ ಆರ್ಥಿಕತೆಯಲ್ಲಿ ಹಿಂದೆ ಹಾಕಿ ಜಾಗತಿಕವಾಗಿ ಐದನೇ ಸ್ಥಾನಕ್ಕೇರಿದ್ದೇವೆ. 1947ರಲ್ಲಿ ಭಾರತದ ಒಟ್ಟು ದೇಶಿಯ ಉತ್ಪನ್ನವು 2.7 ಲಕ್ಷ ಕೋಟಿ ರೂಪಾಯಿ ಆಗಿತ್ತು. ಈಗ ನಮ್ಮ ಜಿಡಿಪಿ 273 ಲಕ್ಷ ಕೋಟಿ ರೂಪಾಯಿ ಮೀರಿದೆ. ಇನ್ನೊಂದು ವೈಶಿಷ್ಟ್ಯೆಂದರೆ ನಾವು ಚೀನಾವನ್ನು ಹಿಂದಿಕ್ಕಿ ಜಗತ್ತಿನಲ್ಲಿಯೇ ಅತಿಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರ ಎಂಬ ಪಟ್ಟವನ್ನು ಶೀಘ್ರದಲ್ಲಿಯೇ ಗಳಿಸಲಿದ್ದೇವೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ನಮ್ಮ ಜನಸಂಖ್ಯೆ 35 ಕೋಟಿ ಇತ್ತು. ಈಗ 141 ಕೋಟಿಗೆ ತಲುಪಿದೆ.

ಪ್ರಸ್ತುತ ಭಾರತವು ಪ್ರತಿಯೊಂದು ಕ್ಷೇತ್ರದಲ್ಲಿ ಜಗತ್ತೇ ಗುರುತಿಸುವಂತೆ ಬೆಳೆದಿದೆ. ಹಿಂದುಳಿದ ರಾಷ್ಟ್ರ ಎಂಬ ಹಣೆಪಟ್ಟಿ ಕಳಚಿ ಪ್ರಗತಿಶೀಲ ದೇಶವಾಗಿ ಹೊರಹೊಮ್ಮಿದೆ. ಆದರೆ, ಇದೇ ವೇಳೆ ದೇಶದ ಜನರ ನಡುವೆ ಆರ್ಥಿಕ ಅಂತರ ವ್ಯಾಪಕವಾಗಿದೆ. ದೇಶದ ಶೇ. 10ರಷ್ಟು ಜನರ ಬಳಿ ಶೇ. 60ರಷ್ಟು ಸಂಪತ್ತು ಇದೆ. ಇನ್ನುಳಿದ ಶೇ. 90 ಜನರ ಬಳಿ ಇರುವುದು ಶೇ. 40ರಷ್ಟು ಮಾತ್ರ. ಸಂಪತ್ತಿನ ಅಸಮಾನತೆ ಹಂಚಿಕೆಯನ್ನು ನಿವಾರಿಸಿ ಸರ್ವರನ್ನು ಸಬಲರನ್ನಾಗಿಸುವ ಮೂಲಕ ಭಾರತವು ಮುಂದುವರಿದ ರಾಷ್ಟ್ರವಾಗಬೇಕಿದೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ’ ಎಂಬ ಧ್ಯೇಯೋದ್ದೇಶ ಸಾಕಾರಕ್ಕೆ ಜನಪ್ರತಿನಿಧಿಗಳು- ಜನರು ಕೈಜೋಡಿಸಬೇಕಿದೆ. ಸಂವಿಧಾನವು ಹಕ್ಕುಗಳನ್ನು ನೀಡಿದಂತೆ ಕರ್ತವ್ಯಗಳನ್ನೂ ನೀಡಿದೆ. ಸರ್ವರೂ ಇದನ್ನರಿತು ನಡೆದುಕೊಂಡಲ್ಲಿ ಭಾರತ ಇನ್ನಷ್ಟು ಬೆಳಗುವುದರಲ್ಲಿ ಅನುಮಾನವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net