

ನವದೆಹಲಿ: ಕರೊನಾದಿಂದಾಗಿ ಜಾಗತಿಕ ಅರ್ಥ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ. ಇಂಥ ಸಂದರ್ಭದಲ್ಲಿ ಪದವಿ ಪಡೆದು ಹೊರಬರುತ್ತಿರುವ ವಿದ್ಯಾರ್ಥಿಗಳು ಹೆಚ್ಚು ಮುಕ್ತರಾಗಿರಬೇಕು, ತಾಳ್ಮೆ ವಹಿಸಬೇಕು ಹಾಗೂ ಭರವಸೆಯುಳ್ಳವರಾಗಿರಬೇಕು ಎಂದು ಗೂಗಲ್ ಸಿಇಒ ಸುಂದರ್ ಪಿಚಾಯಿ ಹೇಳಿದ್ದಾರೆ.
ಪದವಿ ತರಗತಿಗೆ ವಿಡಿಯೋ ಸಂವಾದದ ಮೂಲಕ ವಿಶೇಷ ಸಂದೇಶ ನೀಡಿದ ಪಿಚಾಯಿ, ತಾವು ಪದವಿ ಆರಂಭದಲ್ಲಿ ಅನುಭವಿಸಿದ ಸಂಕಷ್ಟದ ದಿನಗಳನ್ನು ನೆನೆದರು. ಇಡೀ ಜಗತ್ತೇ ಇಂದು ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ನಾನು ಧನಾತ್ಮಕ ಚಿಂತನೆಗಳನ್ನು ಹೊಂದಿರಬೇಕು ಎಂದು ಹೇಳಿದರು.
ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಆಗಮಿಸಿದ ದಿನಗಳನ್ನು ಅವರು ನೆನೆದರು. ಸ್ಯಾನ್ಫೋರ್ಡ್ ವಿವಿಗೆ ನನ್ನನ್ನು ಅಧ್ಯಯನಕ್ಕೆ ಕಳುಹಿಸಲು ವಿಮಾನದ ಟಿಕೆಟ್ಗಾಗಿ ತಂದೆ ಒಂದು ವರ್ಷದ ಸಂಬಳ ಖರ್ಚು ಮಾಡಿದ್ದರು. ಅದೇ ಮೊದಲ ಬಾರಿಗೆ ನಾನು ವಿಮಾನ ಪ್ರಯಾಣ ಮಾಡಿದ್ದು ಎಂದು ಹೇಳಿದ್ದಾರೆ.
ಆಗ ಅಮೆರಿಕ ಭಾರಿ ದುಬಾರಿಯಾಗಿತ್ತು. ಮನೆಗೆ ದೂರವಾಣಿ ಕರೆ ಮಾಡಬೇಕೆಂದರೆ ಒಂದು ನಿಮಿಷಕ್ಕೆ ಎರಡು ಡಾಲರ್ ತೆರಬೇಕಾಗಿತ್ತು. ಇನ್ನು ನಾನೊಂದು ಬ್ಯಾಕ್ಪ್ಯಾಕ್ ಖರೀದಿಸಬೇಕೆಂದರೆ ಅದಕ್ಕೆ ತಂದೆಯ ಒಂದು ತಿಂಗಳ ಸಂಬಳ ಬೇಕಾಗಿತ್ತು ಎಂದು ಅವರು ಸ್ಮರಿಸಿದ್ದಾರೆ.
ಅಂದಿನ ದಿನಗಳಲ್ಲಿ ತಂತ್ರಜ್ಞನದ ಅನುಭವವೇ ನಮಗಿರಲಿಲ್ಲ. ಆದರೆ ಇಂದು ಮಕ್ಕಳು ಎಲ್ಲ ರೀತಿಯ, ಎಲ್ಲ ವಿವಿಧ ಕಂಪ್ಯೂಟರ್ಗಳನ್ನು ಬಳಸುವುದರೊಂದಿಗೆ ಬೆಳೆಯುತ್ತಿದ್ದಾರೆ. ನನಗೆ ಹತ್ತು ವರ್ಷವಾಗುವವರೆಗೆ ನಮ್ಮ ಮನೆಯಲ್ಲಿ ಟೆಲಿಫೋನ್ ಇರಲಿಲ್ಲ. ಅಮೆರಿಕಕ್ಕೆ ಆಗಮಿಸುವವರೆಗೆ ನಿಯಮಿತವಾಗಿ ಕಂಪ್ಯೂಟರ್ ಕೂಡ ಬಳಸುತ್ತಿರಲಿಲ್ಲ. ಕೊನೆಗೊಂದು ದಿನ ನಮ್ಮ ಮನೆಗೆ ಟಿವಿ ಬಂದಾಗ ಅದರಲ್ಲಿ ಒಂದೇ ಚಾನೆಲ್ ಬರುತ್ತಿತ್ತು ಎಂದು ಅವರು ಅಮೆರಿಕ ಹಾಗೂ ಭಾರತದಲ್ಲಿ ಬದುಕನ್ನು ಹೋಲಿಕೆ ಮಾಡಿದರು.
ಈ ಕಾರ್ಯಕ್ರಮವನ್ನು ಯೂಟ್ಯೂಬ್ ನೇರ ಪ್ರಸಾರ ಮಾಡಲಾಗಿತ್ತು. ಇದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಪತ್ನಿ ಮಿಶೆಲ್ ಒಬಾಮಾ, ಗಾಯಕಿರಾದ ಲೇಡಿ ಗಾಗಾ, ಬಿಯಾನ್ಸ್ ಮೊದಲಾದವರು ಪಾಲ್ಗೊಂಡಿದ್ದರು.
ಚೆನ್ನೈಯಲ್ಲಿ ಬೆಳೆದ ಸುಂದರ್ ಪಿಚಾಯಿ, ಮೆಟಿರಿಯಲ್ ಸೈನ್ಸ್ ಇಂಜಿನಿಯರ್ ಆಗಿದ್ದರು. 2004ರಲ್ಲಿ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್ ಆಗಿ ಗೂಗಲ್ ಸೇರಿದರು. ಕಂಪನಿಯ ಉತ್ಪಾದನಾ ಮುಖ್ಯಸ್ಥ, ಕೊನೆಗೆ 2015ರಲ್ಲಿ ಸಿಇಒ ಆಗಿ ನೇಮಕಗೊಂಡರು. ಗೂಗಲ್ ಮಾತೃ ಸಂಸ್ಥೆಯಾದ ಅಲ್ಫಾಬೆಟ್ ಸಂಸ್ಥೆಗೂ ಮುಖ್ಯಸ್ಥರಾಗಿದ್ದಾರೆ.