ಮಕ್ಕಳ ಕಳ್ಳರಿಗೆ ಹೆದರಿ ಮಗನಿಗೆ ಚೈನ್ ಕಟ್ಟಿಟ್ಟು ಕೆಲಸಕ್ಕೆ ಹೋದ ಅಪ್ಪ ಅಮ್ಮ!

ca
Published on

ಲಖನೌ: ಮಕ್ಕಳ ಕಳ್ಳತನ ಹೆಚ್ಚಾಗುತ್ತಿದೆ ಎಂದು ಹೆದರಿದ ಅಪ್ಪ ಅಮ್ಮ, ತಮ್ಮ ಮಗನ ಕಾಲುಗಳನ್ನು ಚೈನ್​ನಿಂದ ಕಟ್ಟಿ ಕೆಲಸಕ್ಕೆ ಹೋಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢ್​ನಲ್ಲಿ ನಡೆದಿದೆ.

ಅಲಿಗಢ್​ನ ಖೇಡಾ ಪೊಲೀಸ್ ಠಾಣೆ ಪ್ರದೇಶದ ಕ್ವಾರ್ಸಿ ಬೈಪಾಸ್‌ನಲ್ಲಿರುವ ಸರೋಜ್​ ನಗರದ ಸ್ಲಂ ಏರಿಯಾದಲ್ಲಿ ಇಂತಹ ಘಟನೆ ನಡೆದಿದೆ. ಹೆಚ್ಚು ಕಮ್ಮಾರರು ಇರುವ ಈ ಪ್ರದೇಶದಲ್ಲಿ ಪೋಷಕರು ತಮ್ಮ ಮಗನ ಕಾಲಿಗೆ ಚೈನ್​ ಹಾಕಿ ಕಟ್ಟಿ ಬೀಗ ಹಾಕಿಕೊಂಡು ಹೋಗಿರುವ ದೃಶ್ಯ ಕಂಡುಬಂದಿದೆ. ಮಕ್ಕಳ ಕಳ್ಳರಿಂದ ಮಗನನ್ನು ರಕ್ಷಿಸಲು ಈ ರೀತಿ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ನಮ್ಮ ಮನೆಯ ಹತ್ತಿರದಲ್ಲೇ ಇರುವ ಶಿವಾನಿ ಹೆಸರಿನ ಬಾಲಕಿಯನ್ನು ಜೂನ್​ 22ರಂದು ಮಕ್ಕಳ ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಈ ವಿಚಾರದಲ್ಲಿ ನಾವೆಲ್ಲರೂ ಸೇರಿ ಪೊಲೀಸ್ ದೂರನ್ನೂ ನೀಡಿದ್ದೇವೆ. ಆದರೆ ಇದುವರೆಗೂ ಶಿವಾನಿಯನ್ನು ಪೊಲೀಸರು ಹುಡುಕಿಲ್ಲ. ಇತ್ತೀಚೆಗೆ ಈ ರೀತಿ ಮಕ್ಕಳ ಕಳ್ಳತನವಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೇ ಕಾರಣಕ್ಕೆ ನಾವು ನಮ್ಮ ಮಗನಿಗೆ ಚೈನ್​ನಲ್ಲಿ ಬಂಧಿಸಿದ್ದೆವು. ನಾವಿಬ್ಬರೂ ಕೆಲಸ ಮಾಡುವಾಗ ಅವನು ಸುರಕ್ಷಿತವಾಗಿರಲಿ ಎನ್ನುವುದು ನಮ್ಮ ಉದ್ದೇಶವಾಗಿತ್ತು ಎಂದು ಬಾಲಕನ ತಂದೆ ತಾಯಿ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net