ಅಗ್ರಸೇನನಿಗೆ ಹೊಯ್ಸಳನ ಸಾಥ್; ಊರ ಹುಡುಗನ ಬೆನ್ನಿಗೆ ನಿಂತ ನಟ ಡಾಲಿ ಧನಂಜಯ

agrasena
Published on

ಬೆಂಗಳೂರು: ‘ಭಜರಂಗಿ’ ಹರ್ಷ ಜತೆ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಮುರುಗೇಶ್ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ‘ಅಗ್ರಸೇನಾ’. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅತಿಥಿಯಾಗಿದ್ದ ನಟ ಡಾಲಿ ಧನಂಜಯ, ‘ನಿರ್ದೇಶಕ ಮುರುಗೇಶ್ ನಮ್ಮ ಅರಸೀಕೆರೆಯವರು. ಒಂದೊಳ್ಳೆ ಸಿನಿಮಾ ಮಾಡಿರುವ ಹೊಸ ತಂಡಕ್ಕೆ ಮಾರಲ್ ಸಪೋರ್ಟ್ ಮಾಡಲು ಬಂದಿದ್ದೇನೆ’ ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು. ಚಿತ್ರಕ್ಕೆ ಅಮರ್ ವಿರಾಜ್ ನಾಯಕನಾಗಿದ್ದು, ಅವರಿಗೆ ರಚನಾ ದಶರಥ್ ನಾಯಕಿಯಾಗಿದ್ದಾರೆ. ಜತೆಗೆ ಅಗಸ್ತ್ಯ ಬೆಳಗೆರೆ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಿರಿಯ ನಟ ರಾಮಕೃಷ್ಣ ಅವರ 200ನೇ ಚಿತ್ರವಿದು. ಭಾರತಿ ಹೆಗ್ಡೆ, ತನಿಶಾ ರೆಡ್ಡಿ ತಾರಾಗಣದಲ್ಲಿದ್ದಾರೆ.

ನಿರ್ದೇಶಕ ಮುರುಗೇಶ್, ‘ಆ್ಯಕ್ಷನ್, ಫ್ಯಾಮಿಲಿ, ಸೆಂಟಿಮೆಂಟ್, ಲವ್ ಹೀಗೆ ಎಲ್ಲ ರೀತಿಯ ಅಂಶಗಳಿರುವ ಚಿತ್ರವಿದು. ಡಾಲಿ ಅವರು ನಮ್ಮ ತಂಡಕ್ಕೆ ಆನೆಬಲ ತುಂಬಿದ್ದಾರೆ. ತಂದೆ-ಮಗನ ಸಂಬಂಧದ ಕಥೆ ಒಂದೆಡೆ ಹಾಗೂ ಲವ್‌ಸ್ಟೋರಿ ಮತ್ತೊಂದು ಕಡೆ ಎರಡು ಟ್ರ್ಯಾಕ್‌ನಲ್ಲಿ ಕಥೆ ಸಾಗುತ್ತದೆ’ ಎಂದು ಮಾಹಿತಿ ನೀಡಿದರು. ಚಿತ್ರದಲ್ಲಿ ಆರು ಹಾಡುಗಳಿದ್ದು ಎಂ.ಎಸ್. ತ್ಯಾಗರಾಜ್ ಸಂಗೀತ, ಆರ್.ಪಿ.ರೆಡ್ಡಿ ಛಾಯಾಗ್ರಹಣ,ವಿಜಯ್ ಕುಮಾರ್ ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net