

ಬೆಂಗಳೂರು: ಪ್ರಾಸ್ಟೇಟ್ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ಭಾನುವಾರ ಸೈಕ್ಲೋಥಾನ್ ಆಯೋಜಿಸಿತ್ತು. 6.5 ಕಿ.ಮೀ. ಸಾಗಿದ ಸೈಕ್ಲಿಂಗ್‌ನಲ್ಲಿ 400 ಕ್ಕೂ ಹೆಚ್ಚು ಜನ ಭಾಗವಹಿಸಿ, ಪ್ರಾಸ್ಟೇಟ್ ಕ್ಯಾನ್ಸರ್‌ನ್ನು ಆರಂಭಿಕ ಪತ್ತೆ ಮತ್ತು ನಿಯಮಿತ ಸ್ಕ್ರೀನಿಂಗ್ ನಡೆಸುವಂತೆ ಅರಿವು ಮೂಡಿಸಿದರು.
ಎಚ್‌ಸಿಜಿ ಸಿಇಓ ಮನೀಶಾ ಕುಮಾರ್, ಅಧಿಕಾರಿಗಳಾದ ಡಾ. ರಘುನಾಥ್,ಅರ್ಚನಾ ರುದ್ರ, ಅರುಣ್ ಶಿವನೇಸನ್ ಸೈಕ್ಲೋಥಾನ್ ಚಾಲನೆ ನೀಡಿದರು. ಜಾಥಾವು ರೆಸಿಡೆನ್ಸಿ ರಸ್ತೆ, ಕ್ವೀನ್ಸ್ ರಸ್ತೆ, ವಿಧಾನ ಸೌಧ, ಮತ್ತು ಕೆ.ಆರ್.ವೃತ್ತ ಮಾರ್ಗವಾಗಿ ಚಲಿಗೆ ಎಚ್‌ಸಿಜಿ ಆಸ್ಪತ್ರೆಗೆ ಹಿಂದಿರುಗಿತು.
ಈ ವೇಳೆ ಮಾತನಾಡಿದ ಎಂ.ಎಸ್.ಮನೀಶಾ ಕುಮಾರ್, ಸೈಕ್ಲೋಥಾನ್ ಪ್ರಮುಖ ಉದ್ದೇಶಕ್ಕಾಗಿ ಸಮುದಾಯವನ್ನು ಒಗ್ಗೂಡಿಸಲು ಉತ್ತಮ ವೇದಿಕೆಯಾಗಿದ್ದು, ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪುರುಷರಿಗೆ ತಮ್ಮ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸುವ ಕುರಿತು ಅರಿವು ಮೂಡಿಸಲು ಸಹಕಾರಿಯಾಗಿದೆ. ಏಇಎ ಕ್ಯಾನ್ಸರ್ ಸೆಂಟರ್‌ನಲ್ಲಿ, ಪ್ರಾಸ್ಟೇಟ್ ಕ್ಯಾನ್ಸರ್‌ಗೆ ವಿಶ್ವ ದರ್ಜೆಯ ಆರೈಕೆ ಒದಗಿಸಲು ನಾವು ಬದ್ಧರಾಗಿದ್ದೇವೆ. ಇಂತಹ ಉಪಕ್ರಮಗಳು ಇನ್ನಷ್ಟು ಸೇವೆ ಒದಗಿಸಲು ಅವಕಾಶ ಮಾಡಿಕೊಡುತ್ತವೆ ಎಂದರು.
ಬೆಂಗಳೂರಿನ ಕೆಆರ್ ರಸ್ತೆಯ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದ ಯುರೋ ಆಂಕೊಲಾಜಿಯ ನಿರ್ದೇಶಕ ಡಾ. ರಘುನಾಥ್ ಮಾತನಾಡಿ, ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚುತ್ತಿರುವ ಸಮಸ್ಯೆಯಾಗಿದ್ದರೂ , ಆರಂಭಿಕ ಹಂತದಲ್ಲಿ ಪತ್ತೆಯಾದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ. ಇಂದಿನ ಸೈಕ್ಲೋಥಾನ್ ಎಲ್ಲರೂ ಆರೋಗ್ಯದ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬಹುದು ಎಂಬುದನ್ನು ನೆನಪಿಸಿದೆ. ನಮ್ಮ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅತ್ಯಾಧುನಿಕ ಆರೈಕೆಯನ್ನು ಒದಗಿಸುತ್ತಿದ್ದೇವೆ. ನಿಯಮಿತ ಸ್ಕ್ರೀನಿಂಗ್ ಮತ್ತು ಆರಂಭಿಕ ಪತ್ತೆಯಿಂದ ಹೆಚ್ಚಿನ ಜೀವಗಳನ್ನು ಉಳಿಸಲಾಗಿದೆ ಎಂದರು.