'ಮೈಚಾಂಗ್' ಚಂಡಮಾರುತ: ಸತತ ಐದನೇ ದಿನವೂ ಶಾಲಾ-ಕಾಲೇಜುಗಳಿಗೆ ರಜೆ! ಮಳೆ ಮುಂದುವರಿಕೆ

ವಿಜಯವಾಣಿ (4)
Published on

ತಮಿಳುನಾಡು: ಮೈಚಾಂಗ್ ಚಂಡಮಾರುತದ ತೀವ್ರತೆಗೆ ತಮಿಳುನಾಡಿನ ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳು ತತ್ತರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಾನಿಗೊಳಗಾದ ಪ್ರದೇಶಗಳಲ್ಲಿನ ಪರಿಹಾರ ಕಾರ್ಯಗಳ ಕಾರಣದಿಂದ ಇದೀಗ ತಮಿಳುನಾಡು ಸರ್ಕಾರ ಸತತ ಐದನೇ ದಿನ ಕೂಡ ಚೆನ್ನೈನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಚೆನ್ನೈನ ಹಲವಾರು ಭಾಗಗಳು ಮತ್ತು ನೆರೆಯ ಜಿಲ್ಲೆಗಳು ಜಲಾವೃತಗೊಂಡಿದೆ. ಮೂಲಭೂತ ಸರಕುಗಳ ಕೊರತೆಯಿಂದ ಜನರು ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ನಗರದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 20ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡ ತಡರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿ ಶುಕ್ರವಾರ (ಡಿ.08) ಬೆಳಗ್ಗೆ ಮತ್ತೊಂದು ಮೃತದೇಹವನ್ನು ಹೊರತೆಗೆದಿದೆ.

ಸದ್ಯ ಪರಿಹಾರ ಚಟುವಟಿಕೆಗಳನ್ನು ತ್ವರಿತಗೊಳಿಸಲಾಗಿದೆ ಮತ್ತು ನಗರದ ವಿವಿಧ ಸ್ಥಳಗಳಲ್ಲಿ ನಿಂತ ನೀರನ್ನು ಪಂಪ್ ಮಾಡುವ ಪ್ರಯತ್ನಗಳು ಭರದಿಂದ ಸಾಗುತ್ತಿವೆ ಎಂದು ಸರ್ಕಾರ ತಿಳಿಸಿದೆ. ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಮತ್ತು ಶನಿವಾರ ತಮಿಳುನಾಡು ಮತ್ತು ಕೇರಳದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ನೀಡಿದ್ದು, ಪುದುಚೇರಿಯಲ್ಲಿ ವ್ಯಾಪಕ ಮಳೆ ಸುರಿಯಲಿದೆ ಎಂದು ಹೇಳಿದೆ.

"ಮುಂದಿನ 5 ದಿನಗಳಲ್ಲಿ ಕೇರಳ ಮತ್ತು ಮುಂದಿನ 3 ದಿನಗಳಲ್ಲಿ ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಲಕ್ಷದ್ವೀಪಗಳಲ್ಲಿ ಪ್ರತ್ಯೇಕವಾದ ಗುಡುಗು, ಮಿಂಚು ಸಹಿತ ಹಗುರ ಮಳೆಯಾಗುವ ಸಾಧ್ಯತೆಯಿದೆ" ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net