

ಕುಂದಾಪುರ: ಸೈಕಲಲ್ಲಿ ಪ್ರಯಾಣಿಸುತ್ತಿದ್ದ ಸವಾರನೊಬ್ಬ ಸೈಕಲ್ ಸಹಿತ ಬಸ್ ಮುಂದಿನ ಚಕ್ರಕ್ಕೆ ಸಿಲುಕಿ ಅಪಾಯದಿಂದ ಪಾರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ನಡೆದಿದೆ.
ಬಸ್ ಏಕಾಏಕಿ ಎಡಮಗ್ಗಲಿಗೆ ತಿರುಗಿದ್ದರಿಂದ ರಸ್ತೆಯ ಅಂಚಿನಲ್ಲಿ ಸೈಕಲ್ ಚಲಾಯಿಸುತ್ತಿದ್ದ ವ್ಯಕ್ತಿಗೆ ಡಿಕ್ಕಿಯಾಗಿದೆ. ಈ ವೇಳೆ ಬಸ್ಸಿನ ಮುಂಭಾಗದ ಚಕ್ರದಡಿಗೆ ಸೈಕಲ್ ಸಿಲುಕಿದೆ. ಸೈಕಲ್ ಚಾಲಕನ ಮೇಲೆ ಟೈಯರ್ ಹರಿದು ಹೋಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ತಕ್ಷಣವೇ ಬ್ರೇಕ್ ಹಾಕಿದ ಪರಿಣಾಮ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಸೈಕಲ್ ಮುರಿದು ಪುಡಿ ಪುಡಿಯಾಗಿದೆ. ತಕ್ಷಣವೇ ಸ್ಥಳದಲ್ಲಿದ್ದ ಸ್ಥಳೀಯರು ಬಂದು ಸೈಕಲ್ ಚಾಲಕನನ್ನು ಮೇಲಕ್ಕೆತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಹೆಲ್ಮಟ್ಗೆ ಅಳವಡಿಸಿದ ಕ್ಯಾಮೆರಾದಲ್ಲಿ, ಈ ಭೀಕರ ದೃಶ್ಯ ದಾಖಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಉಡುಪಿ ಲೈವ್ ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಈವರೆಗೂ ಎಂಟು ಸಾವಿರಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ.