ಶಾಲೆಗಾಗಿ ಸೈಕಲ್ ಅಭಿಯಾನ : ದೇಣಿಗೆ ಸಂಗ್ರಹಕ್ಕೆ ಹಳೇ ವಿದ್ಯಾರ್ಥಿಯ ವಿಭಿನ್ನ ಪ್ರಯೋಗ : ರಾಜಧಾನಿಯಲ್ಲಿ ಸಂಗ್ರಹ

SUBHODHA
ಪಾಣಾಜೆಯ ಸುಬೋಧ ಪ್ರೌಢಶಾಲೆ.
Published on

ಶಶಿ ಕುತ್ಯಾಳ ಈಶ್ವರಮಂಗಲ

ಇಂದು ಕಲಿತ ಶಾಲೆಯನ್ನು ಮರೆಯುವವರೇ ಜಾಸ್ತಿ. ಆದರೆ ಇಲ್ಲೊಬ್ಬ ಯುವಕ ತಾನು ಕಲಿತ ಹುಟ್ಟೂರಿನ ಕನ್ನಡ ಮಾಧ್ಯಮ ಶಾಲೆಯ ಅಭಿವೃದ್ಧಿಗಾಗಿ ಕೊಡುಗೆ ನೀಡಬೇಕೆಂದು ರಾಜ್ಯದ ರಾಜಧಾನಿಯಲ್ಲಿ ಸೈಕಲ್ ಯಾತ್ರೆಯ ಮೂಲಕ ದೇಣಿಗೆ ಸಂಗ್ರಹ ಅಭಿಯಾನ ಕೈಗೊಂಡಿದ್ದಾರೆ. ಇಂಗ್ಲಿಷ್ ಮಾಧ್ಯಮ ಕಲಿಕೆಯ ವ್ಯಾಮೋಹದ ನಡುವೆಯೂ ಈ ವಿಭಿನ್ನ ಪ್ರಯೋಗದ ಮೂಲಕ ಅವರು ಕನ್ನಡಾಭಿಮಾನಿ ಶಿಕ್ಷಣ ಪ್ರೇಮಿಯಾಗಿ ಗಮನ ಸೆಳೆದಿದ್ದಾರೆ.

ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಕಡಮ್ಮಾಜೆ ನಿವಾಸಿ ಜಗನ್ನಾಥ ರೈ-ಸಂಜೀವಿ ಜಿ.ರೈ ದಂಪತಿ ಪುತ್ರ ರಾಕೇಶ್ ರೈ ಈ ವಿದ್ಯಾಭಿಮಾನಿ. ತಾನು ಪ್ರೌಢ ಶಿಕ್ಷಣ ಪೂರೈಸಿದ ಪಾಣಾಜೆಯ ಸುಬೋಧ ಕನ್ನಡ ಮಾಧ್ಯಮ ಪ್ರೌಢಶಾಲೆಯ ಅಭಿವೃದ್ಧಿಗಾಗಿ ಸೈಕಲ್ ಮೂಲಕ ದೇಣಿಗೆ ಸಂಗ್ರಹ ಅಭಿಯಾನ ಕೈಗೊಂಡಿದ್ದಾರೆ.

ಪಾಣಾಜೆಯ ವಿದ್ಯಾವರ್ಧಕ ಸಂಘದ ಮೂಲಕ ಸ್ಥಾಪನೆಗೊಂಡ ಇಲ್ಲಿನ ಸುಬೋಧ ಪ್ರೌಢಶಾಲೆ ಗಡಿನಾಡಿನ ಜನತೆಯ ಹೆಮ್ಮೆಯ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆ. 52 ವರ್ಷಗಳ ಇತಿಹಾಸ ಈ ಶಾಲೆಗಿದೆ.

ಶೈಕ್ಷಣಿಕ ಸಂಸ್ಥೆಗಳಿಗೆ ದೇಣಿಗೆ ನೀಡುವ ವಿದ್ಯಾಭಿಮಾನಿಗಳು ಬಹಳಷ್ಟು ಮಂದಿ ಇದ್ದಾರೆ. ನೇರವಾಗಿ ಸಂಪರ್ಕ ಮಾಡದೆಯೂ ದೇಣಿಗೆ ಕಳುಹಿಸಿಕೊಡುವವರು ಇದ್ದಾರೆ. ಆದರೆ ಹಣ ಸುಲಭವಾಗಿ ಸಿಗಬಾರದು, ಕಷ್ಟಪಟ್ಟು ಬರಬೇಕು. ಆ ಕಾರಣಕ್ಕಾಗಿ ತಾನು ಸ್ವತಃ ದಾನಿಗಳನ್ನು ಭೇಟಿಯಾಗಿ, ಮಾಹಿತಿ ನೀಡಿ ದೇಣಿಗೆ ಸಂಗ್ರಹಿಸುತ್ತಿದ್ದೇನೆ. ಮುಂದೆ ಬೆಂಗಳೂರಿನಿಂದ ಪಾಣಾಜೆ ತನಕ ಸೈಕಲ್ ಯಾನ ಕೈಗೊಳ್ಳುವ ಮೂಲಕ ದಾರಿಯುದ್ದಕ್ಕೂ ಸ್ನೇಹಿತ ಬಳಗವನ್ನು ಭೇಟಿಯಾಗುತ್ತಾ ಶಾಲೆಗೆ ದೇಣಿಗೆ ಸಂಗ್ರಹಿಸುವ ಗುರಿ ಇದೆ ಎಂದು ರಾಕೇಶ್ ರೈ ಹೇಳುತ್ತಾರೆ.

ಈವೆಂಟ್ ಮ್ಯಾನೇಜ್ಮೆಂಟ್ ಉದ್ಯಮಿ

ರಾಕೇಶ್ ರೈ 2002ರಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ಈವೆಂಟ್ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಶಾಲೆಗಾಗಿ ಬೆಂಗಳೂರಿನಲ್ಲಿ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಸ್ನೇಹಿತರನ್ನು, ತನ್ನ ಸಂಸ್ಥೆಯ ಗ್ರಾಹಕ ಬಳಗವನ್ನು ದೂರವಾಣಿ ಮೂಲಕ ಸಂಪರ್ಕಿಸಿ ದಿನಾಂಕ ಗೊತ್ತುಪಡಿಸಿ ಅವರ ಬಳಿಗೆ ಸೈಕಲಿನಲ್ಲಿ ತೆರಳಿ ಶಾಲೆಯ ಸಮಗ್ರ ಮಾಹಿತಿಯ ಜತೆಗೆ ಕರಪತ್ರ ನೀಡಿ ದೇಣಿಗೆ ಸಂಗ್ರಹಿಸಿ, ದಾನಿಗಳ ಮೂಲಕವೇ ನೇರವಾಗಿ ವಿದ್ಯಾಸಂಸ್ಥೆಯ ಖಾತೆಗೆ ವರ್ಗಾಯಿಸುತ್ತಿದ್ದಾರೆ.

1.66 ಲಕ್ಷ ರೂ. ವರ್ಗಾವಣೆ

ಪ್ರಸ್ತುತ ರಾಕೇಶ್ ರೈ ಅವರು 700 ಕಿ.ಮೀ ಸೈಕಲ್ ಯಾತ್ರೆ ಮಾಡಿ ಶಾಲೆಗೆ ರೂ. 5 ಲಕ್ಷದಷ್ಟು ದೇಣಿಗೆ ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಈಗಾಗಲೇ 300 ಕಿ.ಮೀ ಸೈಕಲ್ ಯಾತ್ರೆ ಮುಗಿಸಿರುವ ಅವರು 1.66 ಲಕ್ಷ ರೂ. ಜಮೆ ಮಾಡಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮೂರು ವರ್ಷಗಳಿಂದ ಉಚಿತ ಶಿಕ್ಷಣ ವ್ಯವಸ್ಥೆಯ ಮೂಲಕ ಮಕ್ಕಳನ್ನು ಶಾಲೆಗೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ರಾಕೇಶ್ ರೈ ತಾನು ಕಲಿತ ಶಾಲೆಯನ್ನು ಬೆಳೆಸುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಕನ್ನಡ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅವರ ಚಿಂತನೆ ಶ್ಲಾಘನೀಯ. - ಗಿಳಿಯಾಲು ಮಹಾಬಲೇಶ್ವರ ಭಟ್, ಸುಬೋಧ ಪ್ರೌಢಶಾಲೆಯ ಸಂಚಾಲಕ ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಅನುದಾನಿತ ಮತ್ತು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ನಾನು ಕಲಿತ ಶಾಲೆ ಉಳಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ನನ್ನದೊಂದು ಅಳಿಲು ಸೇವೆ. ಮುಂದೆ ಗಡಿಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳಿಗೆ ಸೌಕರ್ಯ ಕಲ್ಪಿಸಿಕೊಡುವ ಯೋಜನೆಯೂ ಇದೆ. - ರಾಕೇಶ್ ರೈ ಕಡಮ್ಮಾಜೆ, ಸೈಕಲ್ ಅಭಿಯಾನ ಕೈಗೊಂಡವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net