

ಕಾರ್ಕಳ: ಬ್ಯಾಂಕಿಂಗ್ ಸಂಸ್ಥೆ ತಮ್ಮ ಕಾರ್ಯಾಚರಣೆಗಳಿಗೆ ಸಂಬಂಧಿಸಿ ಆಮೂಲಾಗ್ರ ಬದಲಾವಣೆ ವಿನೂತನ ತಂತ್ರಜ್ಞಾನದ ಸಹಾಯದಿಂದ ಸಾಧ್ಯವಾಗಿಸಿದೆ. ಮಾಸ್ ಬ್ಯಾಂಕಿಂಗ್ ಸೇವೆ ಜತೆ ಕ್ಲಾಸ್ ಬ್ಯಾಂಕಿಂಗ್ ಸೇವೆ ತ್ವರಿತಗತಿಯಲ್ಲಿ ನೀಡಿ ಗ್ರಾಹಕರಿಗೆ ಸಂತುಷ್ಟತೆ ನೀಡುವ ಜತೆಗೆ ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಮುಂಚೂಣಿ ಪಾತ್ರವಹಿಸುತ್ತವೆ ಎಂದು ಕರ್ಣಾಟಕ ಬ್ಯಾಂಕ್ ಎಕ್ಸಿಕ್ಯುಟೀವ್ ಡೈರೆಕ್ಟರ್ ಶೇಖರ ರಾವ್ ಹೇಳಿದರು.
ನಿಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಉದ್ಯಮಾಡಳಿತ ಸಂಸ್ಥೆ ಎನ್.ಕೆ.ತಿಂಗಳಾಯ ಬ್ಲಾಕ್ ಉದ್ಘಾಟನಾ ಸಮಾರಂಭದಲ್ಲಿ ‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವ ಉದ್ಯೋಗ ಅವಕಾಶ’ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ನಿಟ್ಟೆ ವಿವಿ ಕುಲಾಧಿಪತಿ ಎನ್.ವಿನಯ ಹೆಗ್ಡೆ ನೂತನ ಎನ್.ಕೆ.ತಿಂಗಳಾಯ ಬ್ಲಾಕ್ ಉದ್ಘಾಟಿಸಿದರು. ಡಾ.ಎನ್.ಕೆ.ತಿಂಗಳಾಯ ಅವರ ಸಂಶೋಧನಾ ಕೃತಿ ಅನಾವರಣಗೊಳಿಸಲಾಯಿತು. ಸ್ಥಾಪಕ ನಿರ್ದೇಶಕ ಪ್ರಸ್ತುತ ನಿಟ್ಟೆ ಪರಿಗಣಿತ ವಿವಿ ಕುಲಪತಿ ಪ್ರೊ.ಡಾ.ಎಂ.ಎಸ್ ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಡಾ.ಎನ್.ಎಸ್.ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆ ನಿರ್ದೇಶಕ ಡಾ.ಸುಧೀರ್ ಎಂ. ಸ್ವಾಗತಿಸಿ, ವಂದನಾ, ಶ್ರಾವ್ಯ ಮತ್ತು ಮಹಿಮಾ ಪ್ರಾರ್ಥಿಸಿದರು. ಡಾ.ಸುಧೀರ್ ರಾಜ್ ಕೆ. ಮತ್ತು ಮಹಿಮಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಡಾ.ರಾಧಾಕೃಷ್ಣ ಶರ್ಮ ವಂದಿಸಿದರು.