

Curtis Campher : ಕ್ರಿಕೆಟ್ ಎಲ್ಲರ ನೆಚ್ಚಿನ ಕ್ರೀಡೆ. ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಕ್ರಿಕೆಟ್‌ನಲ್ಲಿ ಸದಾ ಒಂದಲ್ಲ ಒಂದು ದಾಖಲೆಗಳು ಆಗುತ್ತಲೇ ಇರುತ್ತವೆ. ಇದರೊಂದಿಗೆ ಇತಿಹಾಸ ಸೃಷ್ಟಿ ಆಗುತ್ತಿರುತ್ತದೆ. ದೊಡ್ಡ ತಂಡಗಳು ಅಥವಾ ಸ್ಟಾರ್ ಆಟಗಾರರು ದಾಖಲೆ ಬರೆದರೆ ಅದು ಅಷ್ಟೊಂದು ಅಚ್ಚರಿ ಎನಿಸುವುದಿಲ್ಲ. ಆದರೆ, ಸಣ್ಣ ತಂಡಗಳು ಅಥವಾ ಒಮ್ಮೆಯೂ ಗುರುತಿಸಿಕೊಳ್ಳದ ಆಟಗಾರರು ದಾಖಲೆ ಬರೆದರೆ, ಅದಕ್ಕಿಂತ ಅಚ್ಚರಿ ಮತ್ತೊಂದಿಲ್ಲ. ಈಗ ಅಂತಹ ಮತ್ತೊಂದು ದಾಖಲೆ ದಾಖಲಾಗಿದೆ.
ಐರಿಶ್ ತಂಡದ ಬೌಲರ್ ಕರ್ಟಿಸ್ ಕ್ಯಾಂಪರ್ ಯಾರೂ ಊಹಿಸಲೂ ಸಾಧ್ಯವಾಗದ ದಾಖಲೆಯನ್ನು ಸೃಷ್ಟಿಸಿದ್ದಾರೆ. ಪ್ರಸ್ತುತ ಐರ್ಲೆಂಡ್‌ನಲ್ಲಿ ನಡೆಯುತ್ತಿರುವ ಅಂತರ-ಪ್ರಾಂತೀಯ ಟಿ20 ಪಂದ್ಯಾವಳಿಯಲ್ಲಿ, 5 ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲ, ವೃತ್ತಿಪರ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಂದಹಾಗೆ, ಇದು ಮಾನ್ಸ್ಟರ್ ರೆಡ್ಸ್ ಮತ್ತು ನಾರ್ತ್ ವೆಸ್ಟ್ ವಾರಿಯರ್ಸ್ ತಂಡಗಳ ನಡುವಿನ ಪಂದ್ಯವಾಗಿತ್ತು. ಇದರಲ್ಲಿ, ಮಾನ್ಸ್ಟರ್ ರೆಡ್ಸ್ ತಂಡದ ಬೌಲರ್ ಕರ್ಟಿಸ್ ಕ್ಯಾಂಪರ್ ಸತತ 5 ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರೆಡ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 188 ರನ್ ಗಳಿಸಿತು. 189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವಾರಿಯರ್ಸ್ ತಂಡ ಕೇವಲ 11 ಓವರ್‌ಗಳಲ್ಲಿ 5 ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಕರ್ಟಿಸ್ ಕ್ಯಾಂಫರ್ ತಮ್ಮ ಕೋಟಾದ 2ನೇ ಓವರ್ ಬೌಲಿಂಗ್ ಮಾಡಲು ಚೆಂಡನ್ನು ಪಡೆದರು.
ಕ್ಯಾಂಫರ್ 12ನೇ ಓವರ್‌ನ ಕೊನೆಯ 2 ಎಸೆತಗಳಲ್ಲಿ 2 ವಿಕೆಟ್‌ಗಳನ್ನು ಪಡೆದರು. ಮತ್ತೆ ತಮ್ಮ 3ನೇ ಓವರ್‌ನಲ್ಲಿ, ಅಂದರೆ, 14 ನೇ ಓವರ್‌ನಲ್ಲಿ, ಅವರು ಮೊದಲ 3 ಎಸೆತಗಳಲ್ಲಿ 3 ವಿಕೆಟ್‌ಗಳನ್ನು ಪಡೆದು, ಕ್ರಿಕೆಟ್‌ನಲ್ಲಿ ಇದುವರೆಗೂ ಮಾಡದ ಹೊಸ ದಾಖಲೆಯನ್ನು ಸೃಷ್ಟಿಸಿದರು. ಇದರೊಂದಿಗೆ, ರೆಡ್ಸ್ ತಂಡವು 100 ರನ್‌ಗಳ ಭಾರಿ ಅಂತರದಿಂದ ಜಯಗಳಿಸಿತು. (ಏಜೆನ್ಸೀಸ್)