ಹೆಕ್ಕಿ ಜೇಬಿಗಿಳಿಸುವವರಿಲ್ಲದೆ ರಸ್ತೆ ಮೇಲೆ ಬಿದ್ದಿದ್ದವು ಒಂದಲ್ಲ, ಎರಡಲ್ಲ 25 ನೋಟುಗಳು!! - ವ್ಯಕ್ತಿಯೊಬ್ಬ ಎಸೆದು ಹೋದ ನೋಟುಗಳವು!!

Currency Notes on road 17 APR 20
Published on

ಇಂದೋರ್​: ರಸ್ತೆ ಮೇಲೆ ನೋಟುಗಳು ಬಿದ್ದುದ್ದು ಕಾಣಸಿಕ್ಕರೆ ಯಾರೇ ಆದರೂ ಎತ್ತಿ ಜೇಬಿಗಿಳಿಸಿಕೊಳ್ಳುತ್ತಿದ್ದರು. ಆದರೆ ಈಗ ಹಾಗಿಲ್ಲ. ಎಷ್ಟು ಮುಖಬೆಲೆಯ ನೋಟೇ ಇರಲಿ, ಎಷ್ಟು ಪ್ರಮಾಣದಲ್ಲೇ ಇರಲಿ ಅವು ಯಾರಿಗೂ ಬೇಡ!!! ನಗದು ಕರೆನ್ಸಿ ಯಾರಿಗೂ ಬೇಡವಾಯಿತು. ಕಾರಣ ಕರೊನಾ ಕಾಟ.

ಕರ್ನಾಟಕದಲ್ಲಿ ಕೆಲವು ದಿನಗಳ ಹಿಂದೆ ಇಂಥದ್ದೇ ಪ್ರಕರಣ ವರದಿಯಾಗಿತ್ತು. ಈಗ ಮಧ್ಯಪ್ರದೇಶದ ಇಂದೋರ್​ನ ಸರದಿ. ಇಲ್ಲಿನ ಖಾತಿಪುರ ಪ್ರದೇಶದ ಲಾಡ್ಜ್​ ಒಂದರ ಎದುರು ಒಬ್ಬ ಅಪರಿಚಿತ ವ್ಯಕ್ತಿ 100, 200 ಮತ್ತು 500 ರೂಪಾಯಿ ಮುಖಬೆಲೆಯ 25 ಕರೆನ್ಸಿ ನೋಟುಗಳನ್ನು ಎಸೆದು ಹೋಗಿದ್ದ. ಸ್ಥಳೀಯರು ಅದನ್ನು ನೋಡಿದರಾದರೂ ಹೆಕ್ಕುವ ಧೈರ್ಯ ಮಾಡಲಿಲ್ಲ. ಅದರ ಬದಲು ಅವರು ನೆರವಿಗಾಗಿ ಮುನ್ಸಿಪಾಲಿಟಿ ಸಿಬ್ಬಂದಿಯ ಮೊರೆ ಹೋಗಿದ್ದರು.

ಮುನಿಲಿಪಾಲಿಟಿಯ ಝೋನಲ್ ಆಫೀಸರ್ ನರೇಂಧ್ರ ಕುರಿಲ್​ ಕೂಡಲೇ ಕಮಿಷನರ್​ ಆಶಿಷ್​ ಸಿಂಗ್ ಅವರಿಗೆ ತಿಳಿಸಿದ್ರು. ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ರು. ಹಾಗೆ ನೋಟು ಇರುವ ವಿಚಾರ ಪೊಲೀಸರಿಗೆ ತಲುಪಿ ಕೊನೆಗೆ ಅವರೇ ಬರಬೇಕಾಯಿತು ಸ್ಥಳಕ್ಕೆ!

ಮುನಿಸಿಪಾಲಿಟಿ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ, ಆ ನೋಟುಗಳ ಮೇಲೆ ಸೋಂಕು ನಿವಾರಕಗಳನ್ನು ಸಿಂಪಡಿಸಲಾಯಿತು. ಬಳಿಕ ಪೊಲೀಸ್ ಪೇದೆಯೊಬ್ಬರು ಆ ನೋಟುಗಳನ್ನು ಕೋಲುಗಳ ಸಹಾಯದಿಂದ ಮೇಲೆತ್ತಿ ಪಾಲಿಥೀನ್ ಬ್ಯಾಗ್​ಗೆ ತುಂಬಿದ್ರು. ನೋಟು ಎಸೆದು ಹೋದ ಅಪರಿಚಿತನ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ. ಸಮೀಪದ ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸತೊಡಗಿದ್ದಾರೆ.

ಮಧ್ಯಪ್ರದೇಶದಲ್ಲಿ ಗುರುವಾರದ ಅಂಕಿ ಅಂಶ ಪ್ರಕಾರ 226 ಜನರಿಗೆ ಪಾಸಿಟಿವ್​ ಆಗಿದ್ದು, ಒಟ್ಟು ಸಂಖ್ಯೆ 1,164ಕ್ಕೆ ತಲುಪಿದೆ. ಈ ಪೈಕಿ ಇಂದೋರ್​ನಲ್ಲೇ 707 ಜನ ಇದ್ದರೆ, ಭೋಪಾಲದಲ್ಲಿ 168 ಜನರಿದ್ದಾರೆ. ಕಳೆದ 24 ಗಂಟೆ ಅವಧಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ ರಾಜ್ಯದಲ್ಲಿ 55ಕ್ಕೆ ತಲುಪಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net