

ಹೆಬ್ರಿ: ಸ್ಥಳೀಯತೆಯೊಂದಿಗೆ ವಿಶ್ವಕ್ಕೆ ವಿಸ್ತರಿಸಿಕೊಂಡ ವಿಶ್ವಮಾನವ ಪ್ರಜ್ಞೆಯ ಸಾಂಸ್ಕೃತಿಕ ಪ್ರತಿಭೆ ಕುವೆಂಪು ಕನ್ನಡದ ನಿಜವಾದ ಹಿರಿಮೆ ಎಂದು ಹಿರಿಯಡಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಸೌಮ್ಯಲತಾ ಪಿ. ಅಭಿಪ್ರಾಯಪಟ್ಟರು.
ಕುಪ್ಪಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸಹಯೋಗದೊಂದಿಗೆ ಹಿರಿಯಡಕ ಸರ್ಕಾರಿ ಕಾಲೇಜು ಆಯೋಜಿಸಿದ ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪು ಕಥನ-ಕವನಗಳ ಕುರಿತು ಮಾತಾನಾಡಿದರು.
ಕಾರ್ಯಕ್ರಮ ಸಂಘಟಕ ಡಾ.ರಾಜಶೇಖರ ಹಳೆಮನೆ ಮಾತನಾಡಿ, ವರ್ತಮಾನದ ಕಾಲ ಕುವೆಂಪು ಅವರನ್ನು ಮರೆಮಾಚುವ ಮತ್ತು ಅದಕ್ಕೆ ಅವತಾರ ಪುರುಷನಾಗಿ ಮೆರೆಸುವ ವಿರುದ್ಧ ಮುಖಗಳಲ್ಲಿ ಕುವೆಂಪು ಅವರ ಮಹತ್ವ ಮಸುಕಾಗಿಸುತ್ತಿದೆ ಎಂದರು.
ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಕುವೆಂಪು ಸಾಹಿತ್ಯದ ಓದು ನಮ್ಮೊಳಗಿನ ಜೀವಪರ ಕಾಳಜಿ ಎಚ್ಚರಿಸಬಲ್ಲದು ಎಂದರು.
ಐಕ್ಯುಎಸಿ ಸಂಚಾಲಕ ಡಾ.ಲಿತಿನ್, ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ರೇವತಿ ವಂದಿಸಿದರು. ರವಿಚಂದ್ರ ಬಾಯರಿ ಕೆ. ಕಾರ್ಯಕ್ರಮ ನಿರೂಪಿಸಿದರು.