

ನರೇಂದ್ರ ಎಸ್.ಮರಸಣಿಗೆ
ತುಂಡುಭೂಮಿ, ಆಗಾಗ ನೆರೆ, ಕಾಡು ಪ್ರಾಣಿಗಳ ಹಾವಳಿ, ದನ ಕರುಗಳ ಕಾಟ, ಆದಾಯಕ್ಕಿಂತ ಖರ್ಚು ಜಾಸ್ತಿ, ನೀರಿಲ್ಲದೆ ಕುಡಿಬೈಲು ಪರಿಸರದಲ್ಲಿ ಹಡಿಲು ಬಿಟ್ಟಿದ್ದ ಹತ್ತಾರು ಜನರ ರೈತರ ಭೂಮಿಯನ್ನು ಕೃಷಿ ಉಳಿಸುವ ಉದ್ದೇಶದಿಂದ ಶಾಂತಿನಿಕೇತನ ಯುವವೃಂದ ಕುಡಿಬೈಲ್ ಕುಚ್ಚೂರು ಅವರು ಹಡಿಲು ಭೂಮಿ ಕೃಷಿ ಮಾಡಲು ಮುಂದಾಗಿದ್ದಾರೆ.
ಸಂಘದ ಎಲ್ಲ ಯುವಜನರು ಸೇರಿಕೊಂಡು ಯೋಜನೆಗೆ ಕೈ ಹಾಕಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಹಡಿಲು ಭೂಮಿ ಕೃಷಿ ಮಾಡಿದ್ದಾಗ ಬಹಳಷ್ಟು ನಷ್ಟ ಉಂಟಾಗಿತ್ತು. ಸಂಘದ ಸದಸ್ಯರೆಲ್ಲ ಕೂಡಿ ನಷ್ಟವನ್ನು ಭರಿಸಿದ್ದರೂ, ಮತ್ತೆ ಕೆಲವು ರೈತರು ಅನೇಕ ರೀತಿಯ ಸಮಸ್ಯೆಯಿಂದ ಹಡಿಲು ಬಿಟ್ಟಾಗ ಕೃಷಿ ಉಳಿಸಿ ಬೆಳೆಸುವ ಉದ್ದೇಶದಿಂದ ಹಡಿಲು ಭೂಮಿ ಕೃಷಿಗೆ ಕೈ ಹಾಕಿದ್ದಾರೆ.
ಈ ವರ್ಷ ಬೃಹತ್ ಪ್ರಮಾಣದಲ್ಲಿ ಕೃಷಿ ಮಾಡುತ್ತಿರುವುದರಿಂದ ಸಂಘದ ಸದಸ್ಯರು ಎಲ್ಲ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಕೃಷಿ ಆಳುಗಳ ಆಯೋಜನೆ ಮಾಡಿದರೆ ಮತ್ತಷ್ಟು ಖರ್ಚು ಬರುವುದರಿಂದ, ಎಲ್ಲ ಕೆಲಸ ಉಚಿತವಾಗಿ ಸಂಘದ ಸದಸ್ಯರು ಮಾಡುತ್ತಾರೆ.
ಅದಮಾರು ಮಠದ ಶ್ರೀಗಳು ಶಾಂತಿನಿಕೇತನ ಸಂಘದೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಅವರೆಲ್ಲ ಕೆಲಸಕಾರ್ಯಗಳಿಗೆ ನಿರಂತರವಾಗಿ ಹುರಿದುಂಬಿಸುತ್ತಾರೆ. ಲಾಕ್ಡೌನ್ ಸಮಯದಲ್ಲಿ ಅವರು ಹಡಿಲು ಭೂಮಿ ಕೃಷಿ ಮಾಡಲು ಪ್ರೇರೇಪಿಸಿದ್ದರು. ಇಂದು ಮತ್ತೊಮ್ಮೆ ಅವರು ಎಲ್ಲ ಸಂಘ ಸದಸ್ಯರಿಗೆ ಆಶೀರ್ವದಿಸಿ ಹಡಿಲು ಭೂಮಿ ಕೃಷಿ ಮಾಡಲು ಮಾರ್ಗದರ್ಶನ ನೀಡುತ್ತಿದ್ದಾರೆ.
ಗದ್ದೆಯಲ್ಲಿ ಉಳುಮೆಯಿಂದ ಕೊಯ್ಲು ತನಕ ಸಂಪೂರ್ಣ ಸಾವಯವ ಪ್ರಕ್ರಿಯೆಗಳು ನಡೆಯುತ್ತದೆ. ರಾಸಾಯನಿಕ ಗೊಬ್ಬರ ಬಳಸದೆ, ಸ್ಥಳೀಯ ಸಂಘ ಸದಸ್ಯರು ಹಾಗೂ ಇತರ ರೈತರ ಮನೆಯ ದನದ ಗೊಬ್ಬರ ಬಳಸಲಾಗುತ್ತದೆ. ಶ್ರೀ ಹೆಬ್ರಿಯ ತಾಲೂಕು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಲೀಲಾವತಿ, ಕೃಷಿ ಅಧಿಕಾರಿ ಉಮೇಶ್, ಯಂತ್ರ ಶ್ರೀ ಯೋಧ ಕೃಷ್ಣ ನಾಯ್ಕ ಬೆಳ್ವೆ ಸಹಕಾರದೊಂದಿಗೆ ಎಲ್ಲ ಕೆಲಸ ನಡೆಯಲಿದೆ. ಸಂಘಕ್ಕೆ ವಿಶೇಷ ದರದಲ್ಲಿ ಮ್ಯಾಟ್ ನೇಜಿ ದೊರಕಲಿದೆ.
ಲಾಕ್ಡೌನ್ನಲ್ಲಿ ಯುವಕರೆಲ್ಲ ಕೆಲಸ ಇಲ್ಲದಿದ್ದಾಗ, ಹಡಿಲು ಭೂಮಿ ಕೃಷಿ ಮಾಡುವ ಯೋಜನೆಗೆ ಕೈ ಹಾಕಿದ್ದರು. ನಷ್ಟವಾದರೂ ಒಂದೆರಡು ವರ್ಷ ಮಾಡಿದರು. ಸಂಪೂರ್ಣ ಸಾವಯುವ ಆದ್ದರಿಂದ ಶಾಂತಿನಿಕೇತನ ಕಜೆ ಬ್ರಾಂಡಿಗೆ ಹೆಬ್ರಿಯಲ್ಲೆಲ್ಲ ಬಹಳಷ್ಟು ಬೇಡಿಕೆ ಇತ್ತು. ಪ್ರತಿ ವರ್ಷ ಇದನ್ನು ಬಳಕೆದಾರರು ಕಜೆ ಅಕ್ಕಿ ನೀಡಿ ಎಂದು ಕೇಳುತ್ತಿದ್ದರು.
ಕೆಲವು ವರ್ಷಗಳಿಂದ ಹಡಿಲು ಬಿಟ್ಟಿದ್ದ ಗದ್ದೆಯನ್ನು, ಶಾಂತಿನಿಕೇತನದವರು ಮಾಡಿದಾಗ ಕೆಲವು ರೈತರು ಸುಗ್ಗಿ ಬೆಳೆ ನಾವು ಮಾಡುತ್ತೇವೆ ಎಂದು ಮುಂದೆ ಬಂದಿರುವುದು ಬಹಳಷ್ಟು ಖುಷಿಯಾಗಿದೆ. ಸಂಘ ಪ್ರೇರಣೆಯಿಂದ ರೈತರು ಉತ್ಸುಕರಾಗಿ ಮುಂದೆ ಬಂದಿರುವುದು ನೋಡಿದರೆ ನಮ್ಮ ಕೆಲಸದ ಬಗ್ಗೆ ಹೆಮ್ಮೆಯಾಗುತ್ತದೆ ಎಂದು ಶಾಂತಿನಿಕೇತನದ ಅಧ್ಯಕ್ಷ ದೀಕ್ಷಿತ್ ನಾಯಕ್ ಹೇಳುತ್ತಾರೆ.
ಸದ್ಯಕ್ಕೆ 300 ಮೀಟರ್ ಬೇಲಿ ಹಾಕಲಾಗಿದೆ. ಜೋರಾಗಿ ಮಳೆ ಬರುವುದರಿಂದ ನೆರೆಯ ಭೀತಿ ಇದೆ. ಬೀಡಾಡಿ ದನಗಳು ನಿರಂತರವಾಗಿ ಗದ್ದೆಗಳಿಗೆ ಬಂದು ಲೂಟಿ ಮಾಡುತ್ತದೆ. ನವಿಲು, ಜಿಂಕೆ, ಹಂದಿಗಳ ಹಾವಳಿಯಿಂದ ತಪ್ಪಿಸಿಕೊಂಡು ಕೃಷಿ ಮಾಡಿದರೆ ಮಾತ್ರ ಒಂದಷ್ಟು ಮಟ್ಟಿಗೆ ಬೆಳೆ ಸಿಗಬಹುದು. ಬಯಲು ಗದ್ದೆ ಆಗಿರುವುದರಿಂದ ಹುಲ್ಲು ಸಿಗುವುದು ಕಷ್ಟ ಇದೆ. ನೀರಾವರಿ ಸಮಸ್ಯೆ ಕಾಡಬಹುದು.
ಭಾರತ ಕೃಷಿ ಪ್ರಧಾನ ದೇಶ, ಕೃಷಿ ಬಿಟ್ಟು ಬೇರೆ ಮುಖ ಮಾಡಿರುವುದು ವಿಷಾದನೀಯ. ಕೃಷಿಯಿಂದ ಸ್ವಾಲಂಬನೆ ಬದುಕು ಸಾಧ್ಯವಾಗುತ್ತದೆ. ನಮ್ಮಲ್ಲಿರುವ ಭೂಮಿಯನ್ನು ಕೃಷಿ ಮಾಡಿದರೆ ದೇಶ ಸೇವೆಯಾಗುತ್ತದೆ. ಈ ನಿಟ್ಟಿನಲ್ಲಿ ಶಾಂತಿನಿಕೇತನದವರು ಸಾಮಾಜಿಕ ಚಿಂತನೆ ಮಾಡಿಕೊಂಡು, ಕೃಷಿಯ ಬಗ್ಗೆ ಯೋಚಿಸಿ ಹಡಿಲು ಭೂಮಿ ಕೃಷಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.-ಈಶಪ್ರಿಯ ತೀರ್ಥ ಸ್ವಾಮೀಜಿ, ಅದಮಾರು ಮಠ ಉಡುಪಿ
ಕೃಷಿಗೆ ಪೂರಕ ವಾತಾವರಣ ಇಲ್ಲ. ಕೃಷಿಯಲ್ಲಿ ರಾಷ್ಟ್ರ ಹಿಂದೆಂದೂ ಕಂಡಿರದ ಪ್ರಪಾತಕ್ಕೆ ತಲುಪಬಹುದು. ಸರ್ಕಾರ ಕೇವಲ ವೋಟ್ ಬ್ಯಾಂಕ್ ಗುರಿಯಾಗಿರಿಸಿಕೊಳ್ಳುವ ಕಾರ್ಯಕ್ರಮ ಕೈಬಿಟ್ಟು ಉಚಿತ ಗೊಬ್ಬರ, ಉಚಿತ ಕೀಟನಾಶಕ , ರೋಗಮುಕ್ತ ಬೀಜಗಳು, ಉಪಕರಣಗಳ ಬೆಲೆ ಇಳಿಕೆ ಮಾಡಬೇಕು. ಸ್ವಾಮೀಜಿಯ ಪ್ರೇರಣೆಯಿಂದ ನಾವು ಹಡಿಲು ಭೂಮಿ ಕೃಷಿ ಮಾಡುತ್ತಿದ್ದೇವೆ. ನಮ್ಮ ಸಂಘದ ಸದಸ್ಯರು ಎಲ್ಲರ ಸಹಕಾರದಿಂದ ಉತ್ತಮವಾಗಿ ಕೆಲಸ ನಡೆಯುತ್ತಿದೆ.-ರಾಜೇಶ್ ನಾಯ್ಕ, ಶಾಂತಿನಿಕೇತನದ ಸಂಸ್ಥಾಪಕ