ಅವಸಾನದಂಚಿಗೆ ಪುರಾತನ ಕೆರೆ : ಕುಸಿದು ವರ್ಷ ಕಳೆದರೂ ಆಗದ ದುರಸ್ತಿ ; ನಾಮಫಲಕ ಅಳವಡಿಕೆ ಆಗ್ರಹ

lake

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಗಂಗೊಳ್ಳಿ ಗ್ರಾಮದ ಶ್ರೀ ವೀರೇಶ್ವರ ದೇವಸ್ಥಾನ ಸಮೀಪದಲ್ಲಿರುವ ಕೆರೆ ಎರಡು ಬದಿ ಕುಸಿದು ವರ್ಷ ಕಳೆದರೂ ಇನ್ನೂ ದುರಸ್ತಿಯಾಗಿಲ್ಲ. ಕೆರೆಯ ಸುತ್ತ ತಡೆಗೋಡೆ ಕೂಡ ಇಲ್ಲ. ಇದು ಅಪಾಯ ಆಹ್ವಾನಿಸುವಂತಿದೆ. ಶ್ರೀ ವೀರೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಅತಿ ಪುರಾತನವಾದ ಬಹಳ ವರ್ಷಗಳ ಈ ಕೆರೆಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಕಾಲಕ್ರಮೇಣ ಕೃಷಿ ಚಟುವಟಿಕೆ ಕ್ಷೀಣಿಸಿದ್ದರಿಂದ ಈ ಕೆರೆ ಅವಸಾನದ ಅಂಚಿಗೆ ತಲುಪಿದೆ. ಕೆಲವು ವರ್ಷಗಳ ಹಿಂದೆ ಮಳೆಗಾಲದ ಸಂದರ್ಭ ಕೆರೆಯ ಉತ್ತರ ಹಾಗೂ ಪಶ್ಚಿಮ ದಿಕ್ಕಿನ ತಡೆಗೋಡೆ ಕುಸಿದಿದ್ದು, ಕೆರೆಗೆ ತಾಗಿಕೊಂಡಿರುವ ಸ್ವಾಮಿ ಮನೆಗೆ ಹೋಗುವ ಕಾಂಕ್ರೀಟ್ ರಸ್ತೆ ಕುಸಿತ ಭೀತಿಯಲ್ಲಿದೆ. ಎರಡು ವರ್ಷ ಹಿಂದಷ್ಟೇ ನೂತನವಾದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ಈ ರಸ್ತೆ ಕೂಡ ಧರಾಶಾಯಿಯಾಗುವ ಭೀತಿ ಸ್ಥಳೀಯರನ್ನು ಆವರಿಸಿದೆ.

ಎಚ್ಚರಿಕೆ ಅಗತ್ಯ

ರಸ್ತೆಗೆ ತಾಗಿಕೊಂಡಿರುವ ಎರಡು ದಿಕ್ಕುಗಳ ತಡೆಗೋಡೆ ಕುಸಿದಿರುವುದರಿಂದ ರಸ್ತೆ ಮೂಲಕ ಸಂಚರಿಸಲು ಹಾಗೂ ನಡೆದಾಡಲು ಎಚ್ಚರಿಕೆ ವಹಿಸಬೇಕಾಗಿದೆ. ಕೆರೆಯ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಕೆರೆ ಇರುವುದು ಯಾರ ಗಮನಕ್ಕೂ ಬಾರದ ಹಾಗೆ ಇದೆ. ರಸ್ತೆ ಮೇಲೆ ಸಂಚರಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಕೆರೆಗೆ ಬೀಳುವ ಸಾಧ್ಯತೆ ಇದೆ. ಪ್ರತಿನಿತ್ಯ ನೂರಾರು ಮಕ್ಕಳು, ಕೂಲಿ ಕಾರ್ಮಿಕರು, ಮೀನುಗಾರರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಕೆರೆಯ ಮೂರು ದಿಕ್ಕಿನಲ್ಲಿ ಯಾವುದೇ ಸೂಕ್ತ ಭದ್ರತೆ ಇಲ್ಲ.

ತಡೆಬೇಲಿ ನಿರ್ಮಾಣಕ್ಕೆ ಒತ್ತಾಯ

ಕೆಲ ವರ್ಷಗಳ ಹಿಂದೆ ಶಾಲಾ ಬಾಲಕನೋರ್ವ ಈ ಕೆರೆಯ ನೀರಿನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಕೂಡ ನಡೆದಿದೆ. ಹೀಗಾಗಿ ರಸ್ತೆಗೆ ತಾಗಿಕೊಂಡು ಕೆರೆ ಇರುವುದರಿಂದ ಕೆರೆಗೆ ಸೂಕ್ತ ತಡೆಬೇಲಿ ನಿರ್ಮಿಸಬೇಕು ಹಾಗೂ ಕೆರೆ ದುರಸ್ತಿಗೊಳಿಸಬೇಕು, ಕೆರೆಯ ಸುತ್ತಲೂ ಬೆಳೆದು ನಿಂತಿರುವ ಗಿಡಗಂಟಿ ಸ್ವಚ್ಛಗೊಳಿಸಿ ನಾಮಫಲಕ ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಭಿವೃದ್ಧಿ ಮರೀಚಿಕೆ

ಪ್ರತಿವರ್ಷ ಕೆರೆ ತಡೆಗೋಡೆ ಕುಸಿದು ಬೀಳುತ್ತಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ಕಳೆದ ಕೆಲವು ವರ್ಷಗಳ ಹಿಂದೆ ಪಂಚಾಯಿತಿ ಅನುದಾನದಿಂದ ಅಭಿವೃದ್ಧಿಪಡಿಸಲಾಗಿತ್ತು. ಆ ಬಳಿಕ ಶ್ರೀ ವೀರೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದೆ. ಇದೀಗ ಕೆರೆ ಎರಡು ಪಾಶ್ವ ಕುಸಿದು ಬಿದ್ದಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಕೆರೆ ಎರಡು ಕಡೆ ಕುಸಿತಗೊಂಡು ವರ್ಷಗಳೇ ಕಳೆದಿದ್ದರೂ, ಸ್ಥಳೀಯಾಡಳಿತ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದಿರುವುದು ಪರಿಸರದ ಜನರ ಆಕ್ರೋಶಕ್ಕೆ ತುತ್ತಾ ಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಮುಂದಾಗಬಹುದಾದ ಅನಾಹುತ ತಪ್ಪಿಸಲು ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿದೆ.

ಗ್ರಾಪಂನಿಂದ ಮುನ್ನೆಚ್ಚರಿಕೆಯಾಗಿ ಕೆರೆಯ ಸುತ್ತಲೂ ರಿಬ್ಬನ್ ಅಳವಡಿಸಲಾಗಿದೆ. ಶಾಶ್ವತ ತಡೆ ಬೇಲಿ ನಿರ್ಮಿಸಲು ಹಾಗೂ ಸೂಚನಾ ಫಲಕ ಅಳವಡಿಸಲು ಕ್ರಮಕೈಗೊಳ್ಳಲಾಗುವುದು. ಕೆರೆ ಅಭಿವೃದ್ಧಿ ಸಂಬಂಧ ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಮಾಡಿಕೊಳ್ಳಲಾಗುವುದು.
-ಉಮಾಶಂಕರ ಗಂಗೊಳ್ಳಿ ಪಿಡಿಒ

ಶ್ರೀ ವೀರೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಕೆರೆ ಎರಡು ಕಡೆ ಕುಸಿತಗೊಂಡು ವರ್ಷಗಳೇ ಕಳೆದಿದ್ದರೂ ದುರಸ್ತಿಗೆ ಮತ್ತು ಕೆರೆಯ ಸುತ್ತಲೂ ಬೇಲಿ ರಚನೆ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಕೆರೆ ಪರಿಸರ ಅಪಾಯಕಾರಿಯಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು.
-ಕೃಷ್ಣ ಸ್ಥಳೀಯ ನಿವಾಸಿ

Share This Article

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…