

ವಿಜಯವಾಣಿ ಸುದ್ದಿಜಾಲ ಕೋಟ
ಸ್ಥಳೀಯ ಕೂಲಿಯಾಳುಗಳ ಕೊರತೆಯಿಂದ ಹೊರರಾಜ್ಯದ ಒಡಿಶಾ, ಕೊಪ್ಪಳ ಕಾರ್ಮಿಕರನ್ನು ಜಿಲ್ಲೆಯಲ್ಲಿ ಕೃಷಿ ಕಾರ್ಯಕ್ಕೆ ಬಳಸಲಾಗುತ್ತಿದೆ. ಕದ್ರಿಕಟ್ಟು ನಿವಾಸಿ ಶೀಲರಾಜ್ ಕಾಂಚನ್ ಕೋಟ ಗ್ರಾಪಂ ಹಾಗೂ ಕೋಟತಟ್ಟು ಗ್ರಾಪಂನ ಹೆಚ್ಚಿನ ಕೃಷಿಭೂಮಿಗಳಲ್ಲಿ ಯಂತ್ರದ ಮೂಲಕ ಕೃಷಿ ಕಾರ್ಯ ನಿರ್ವಹಿಸಿ ಕೃಷಿಯಿಂದ ನಿರಾಸಕ್ತಿಗೊಂಡವರಿಗೆ ಪುನಶ್ಚೇತನ ನೀಡುತ್ತಿದ್ದಾರೆ.
ಒಡಿಶಾ ರಾಜ್ಯದ ಪುರಿಯ ಬರಂಪೂರ್ ಭಾಗದ ಮಹಿಳೆಯರ ಸಹಿತ ಕೂಲಿಯಾಳುಗಳು ನಾಟಿ ಕಾರ್ಯ ಮಾಡುತ್ತಿದ್ದಾರೆ. ರಾಜ್ಯದ ಕೊಪ್ಪಳ, ಗಂಗಾವತಿಯ 100ಕ್ಕೂ ಅಧಿಕ ಕೂಲಿಯಾಳುಗಳು ಆಗಮಿಸಿ ವಿವಿಧ ಭಾಗಗಳಲ್ಲಿ ಕೃಷಿ ಕಾಯಕ ನಡೆಸುತ್ತಿದ್ದಾರೆ. ಕೊಪ್ಪಳದಿಂದ ಆಗಮಿಸಿದ ಕೂಲಿಯಾಳುಗಳಿಗೆ ಎಕರೆಗೆ ಊಟ ಮತ್ತು ಉಪಹಾರ ನೀಡಿ 4,500 ರೂ., ಒಡಿಶಾ ಕಾರ್ಮಿಕರಿಗೆ ಊಟ, ಉಪಹಾರ ಸಹಿತ 550 ರೂ. ಕೂಲಿ ನೀಡಲಾಗುತ್ತಿದೆ.
ಕೋಟ ಹೋಬಳಿ ಭಾಗದಲ್ಲಿ ಹೆಚ್ಚಾಗಿ ಸಾಂಪ್ರದಾಯಿಕ ಕೈನಾಟಿ ಕಾರ್ಯ ನಡೆಯುತ್ತಿದ್ದು, ಸ್ಥಳೀಯ ಕೂಲಿಯಾಳುಗಳ ಸಮಸ್ಯೆ ನಡುವೆ ಹೊರ ಜಿಲ್ಲೆ, ರಾಜ್ಯಗಳ ಕೂಲಿಯಾಳುಗಳ ಅವಲಂಬನೆ ಹೆಚ್ಚಿದೆ. ಈ ನಡುವೆ ಚಾಪೆ ನಾಟಿ, ಬಿತ್ತನೆ, ಹಿಂಡ್ ಬಿತ್ತನೆ, ಡ್ರಮ್ ಬಿತ್ತನೆ ನಡೆಯುತ್ತಿದೆ. ಕೋಟ ಹೋಬಳಿ ಭಾಗದ ಕೋಟ, ಕೋಟತಟ್ಟು, ಸಾಲಿಗ್ರಾಮ, ವಡ್ಡರ್ಸೆ, ತೆಕ್ಕಟ್ಟೆ, ಸಾಸ್ತಾನ ಸೇರಿದಂತೆ ವಿವಿಧ ಭಾಗಗಳಲ್ಲಿ ನಾಟಿ ಕಾರ್ಯಕ್ಕೆ ವೇಗ ದೊರೆತಿದೆ.
ಕೋಣಗಳ ಮೂಲಕ ಉಳುಮೆ ಮಾಡುವ ಪದ್ಧತಿ ಮಾಯವಾಗಿದ್ದು, ಟಿಲ್ಲರ್, ಟ್ರಾೃಕ್ಟರ್ಗಳ ಮೂಲಕ ಉಳುಮೆ ನಡೆಯುತ್ತಿದೆ. ಆದರೆ ಅಪರೂಪದಲ್ಲಿ ಅಲ್ಲೊಂದು, ಇಲ್ಲೊಂದು ಕಡೆ ಸಾಂಪ್ರದಾಯಿಕ ಉಳುಮೆ ನಡೆಯುತ್ತಿದೆ.
ಹಡಿಲು ಬಿದ್ದ ಬಹಳಷ್ಟು ಭೂಮಿಯಲ್ಲಿ ಕೃಷಿ ನಡೆಸಲಾಗಿದೆ. ಕೆಲವು ಭಾಗದಲ್ಲಿ ರಸ್ತೆ ವ್ಯವಸ್ಥೆಗಳಿಲ್ಲದಿರುವುದು ಸಮಸ್ಯೆ. ಪ್ರಸ್ತುತ ಒಡಿಶಾ ರಾಜ್ಯದಿಂದ ಕೂಲಿಯಾಳುಗಳು ಆಗಮಿಸಿದ್ದು, ಸ್ಥಳೀಯ ಕೃಷಿಕರಿಗೆ ಅನುಕೂಲವಾಗಿದೆ. ಕೋಟ, ಕೋಟತಟ್ಟು ಭಾಗದ ರೈತರಿಗೆ ನೆರವು ನೀಡಿದ ಹೆಮ್ಮೆ ನಮ್ಮ ತಂಡಕ್ಕಿದೆ.-ಶೀಲರಾಜ್ ಕಾಂಚನ್, ಯುವ ಕೃಷಿಕರು ಕದ್ರಿಕಟ್ಟು ಕೋಟ