ಎಸ್‌ಡಿಎಂಸಿ ಅಧ್ಯಕ್ಷೆಯಿಂದ ಉಚಿತ ಸೇವೆ : ಸ್ವಂತ ಕಾರಿನಲ್ಲಿ ಮಕ್ಕಳಿಗೆ ಪಿಕ್‌ಅಪ್-ಡ್ರಾಪ್ ; ಶಾಲೆ ಉಳಿಸಿ-ಬೆಳೆಸಲು ಸಹಕಾರ

school
ಶಿರೂರು ಮೇಲ್ಪಂಕ್ತಿ ಶಾಲೆಗೆ ತನ್ನ ಸ್ವಂತ ಕಾರಿನಲ್ಲಿ ಮಕ್ಕಳನ್ನು ಉಚಿತವಾಗಿ ಕರೆದೊಯ್ಯುತ್ತರುವ ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬ ಪರಿಕಲ್ಪನೆ ಪಾಲಕರಲ್ಲಿ ಮೂಡಿದರೆ ಏನು ಬೇಕಾದರೂ ಸಾಧಿಸಬಹುದು. ಅದರಲ್ಲೂ ಮಹಿಳೆಯೊಬ್ಬರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಬೈಂದೂರು ಶೈಕ್ಷಣಿಕ ವಲಯದ ಶಿರೂರು ಪೇಟೆ(ಮೇಲ್ಪಂಕ್ತಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿದೆ.

ಶಿರೂರು ಸಮೀಪದ ಜೋಗೂರು ನಿವಾಸಿ ಹಾಗೂ ಎಸ್‌ಡಿಎಂಸಿ ಮಾಜಿ ಅಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ ಎಂಬುವರು ತಾನು ಖರೀದಿಸಿರುವ ಸ್ವಂತ ಕಾರಿನಲ್ಲಿ ಕಳೆದೆರಡು ಶೈಕ್ಷಣಿಕ ವರ್ಷದಿಂದ ಉಚಿತವಾಗಿ ನಿತ್ಯ 40 ಮಕ್ಕಳನ್ನು ಶಾಲೆಗೆ ಕರೆತಂದು ಮನೆಗೆ ಬಿಡುವ ಕಾಯಕ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ.

ಶಿರೂರು ಪೇಟೆ ಶಾಲೆಗೆ 65 ವರ್ಷಗಳ ಇತಿಹಾಸವಿದೆ. ಈ ಹಿಂದೆ ಇಲ್ಲಿಗೆ ಸಮೀಪದ ಮಕ್ಕಳು ಖಾಸಗಿ ಶಾಲೆ ನೆಚ್ಚಿಕೊಂಡಿದ್ದು, ಕಳೆದ 10 ವರ್ಷಗಳಿಂದೀಚೆಗೆ ಶಾಲೆಯಲ್ಲಿ ಅಸ್ತಿತ್ವಕ್ಕೆ ಬಂದ ಶಾಲಾಭಿವೃದ್ಧಿ ಸಮಿತಿ ಒಂದಷ್ಟು ಹೊಸ ಚಿಂತನೆಗಳೊಂದಿಗೆ ಕಾರ್ಯನಿರ್ವಹಿಸಿ ಪಾಲಕರಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮನವೊಲಿಸಿದೆ. 1ರಿಂದ 7ನೇ ತರಗತಿ ತನಕವಿರುವ ಶಾಲೆಯಲ್ಲಿ ಇದೀಗ 65 ವಿದ್ಯಾರ್ಥಿಗಳಿದ್ದು 15 ಮಕ್ಕಳು ಎಲ್‌ಕೆಜಿ, ಯುಕೆಜಿ ಓದುತ್ತಿದ್ದಾರೆ. ಇಲ್ಲಿ ನುರಿತ ಶಿಕ್ಷಕರಿಂದ ಇಂಗ್ಲಿಷ್ ಕಲಿಕೆಗೂ ಉತ್ತಮ ಅವಕಾಶವಿದೆ. ಎಸ್‌ಡಿಎಂಸಿ ಸದಸ್ಯರು ಮತ್ತು ಶಿಕ್ಷಕ ವೃಂದದವರು ಶಾಲಾಭಿವೃದ್ಧಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ.

ಮೊದಲು ಶಾಲೆಗೆ ಮಕ್ಕಳನ್ನು ಕರೆತರಲು ಆಟೋ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ ಅವರ ದೂರದೃಷ್ಟಿ ಯೋಚನೆಯಿಂದ ಸ್ವತಃ ತಾನೇ ಯಾಕೆ ವಾಹನ ಖರೀದಿಸಿ ಮಕ್ಕಳನ್ನು ಕರೆತರಬಾರದು ಎಂಬ ಯೋಜನೆ ರೂಪಿಸಿಕೊಂಡು ಇಕೋ ಕಾರು ಖರೀದಿಸಿ ನಿತ್ಯ ಬೆಳಗ್ಗೆ ಮೂರು ಟ್ರಿಪ್, ಸಂಜೆ ಮೂರು ಟ್ರಿಪ್ ಮೂಲಕ 40 ಮಕ್ಕಳನ್ನು ಶಾಲೆಗೆ ಕರೆತಂದು, ವಾಪಸ್ ಮನೆಗೆ ಬಿಡುತ್ತಿದ್ದಾರೆ. ವಿಶೇಷವೆಂದರೆ ಅವರೇ ಕಾರು ಚಲಾಯಿಸಿಕೊಂಡು ಶಾಲೆಯಿಂದ ದೂರದ ಹಣೆಬೆಟ್ಟು ಸಹಿತ ಜೋಗೂರು, ಹಣಬರಕೇರಿ, ಮೈಯ್ದಿನ್‌ಪುರ, ಕೋಣ್ಮಕ್ಕಿ, ಮಾರ್ಕೆಟ್, ಕೋಣ್ಮಕ್ಕಿಕ್ರಾಸ್‌ನಿಂದ ಮಕ್ಕಳನ್ನು ಉಚಿತವಾಗಿ ಪಿಕ್‌ಅಪ್ ಮತ್ತು ಡ್ರಾಪ್ ಮಾಡುತ್ತಾರೆ. ಜ್ಯೋತಿ ಶೆಟ್ಟಿ ಎಸ್‌ಡಿಎಂಸಿ ಸಮನ್ವಯ ವೇದಿಕೆ ರಾಜ್ಯ ಖಜಾಂಚಿ ಜತೆಗೆ ಉಡುಪಿ ಜಿಲ್ಲಾಧ್ಯಕ್ಷೆ ಕೂಡ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರೊನಾ ಸಂದರ್ಭ ಹಳ್ಳಿಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವಿದ್ಯಾಗಮದಡಿ ಶಿಕ್ಷಕರು ಪಾಠ ಮಾಡಬೇಕಿದ್ದಾಗ ಅವರನ್ನು ಸ್ವತಃ ನಾನೇ ಆಟೋದಲ್ಲಿ ಕರೆದೊಯ್ಯುತ್ತಿದ್ದೆ. ಬಳಿಕ ಒಂದು ಬಾಡಿಗೆ ಓಮ್ನಿ ಕಾರು ಬಳಸುತ್ತಿದ್ದು, ಇದೀಗ ಸ್ವಂತ ಕಾರಿನ ಮೂಲಕ ಶಾಲೆಗೆ ಮಕ್ಕಳನ್ನು ಉಚಿತವಾಗಿ ಕರೆತರುತ್ತಿದ್ದೇನೆ. ಸರ್ಕಾರಿ ಶಾಲೆ ಉಳಿಸಿ-ಬೆಳೆಸುವ ಸಲುವಾಗಿ ಇಚ್ಛಾಶಕ್ತಿಯಿಂದ ಈ ಕಾರ್ಯ ಮಾಡುತ್ತಿರುವೆ.-ಜ್ಯೋತಿ ಜಯರಾಮ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷೆ

ಶಿರೂರು ಎಸ್‌ಡಿಎಂಸಿ ಅಧ್ಯಕ್ಷೆ ಕಾರ್ಯ ಪ್ರಶಂಸನಾರ್ಹ. ಇದೇ ರೀತಿ ಬೈಂದೂರು ಕ್ಷೇತ್ರದ ಸರ್ಕಾರಿ ಶಾಲೆ ಅಭಿವೃದ್ಧಿಗೆ ದುಬೈಯ 7 ದಾನಿಗಳು ಏಳು ಶಾಲೆಗಳನ್ನು ದತ್ತು ಪಡೆಯಲು ಮುಂದೆ ಬಂದಿದ್ದಾರೆ. ಅನೇಕರು ಸರ್ಕಾರಿ ಶಾಲೆಗೆ ಹಲವು ರೀತಿಯ ಕೊಡುಗೆ ನೀಡುವುದಾಗಿ ಮತ್ತು ಅಭಿವೃದ್ಧಿಗೆ ಬೆಂಬಲ ಸೂಚಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ವಲಯದಿಂದ ಉತ್ತಮ ಸಹಕಾರ ವ್ಯಕ್ತವಾಗುತ್ತಿದೆ.-ಗುರುರಾಜ್ ಗಂಟಿಹೊಳೆ, ಶಾಸಕರು ಬೈಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net