

ನವದೆಹಲಿ: ತಂಡದ ಸದಸ್ಯರಿಗೆ ಕರೊನಾ ಸೋಂಕು ದೃಢಪಟ್ಟಿರುವುದಲ್ಲದೆ, ಉಪನಾಯಕ ಸುರೇಶ್ ರೈನಾ ಅವರು ಐಪಿಎಲ್ 13ನೇ ಆವೃತ್ತಿಯಿಂದ ಹಿಂದೆ ಸರಿದ ಕಾರಣ ತೀವ್ರ ಹಿನ್ನಡೆ ಎದುರಿಸಿರುವ ಚೆನ್ನೈ ಸೂಪರ್ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆ ಇದೆ. ತಂಡದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಐಪಿಎಲ್ನಿಂದ ಹೊರಗುಳಿಯುವ ಸಾಧ್ಯತೆ ಕಾಣಿಸಿದೆ.
ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ 40 ವರ್ಷದ ಹರ್ಭಜನ್ ಸಿಂಗ್ ಈಗಾಗಲೆ ತಡವಾಗಿ ತಂಡವನ್ನು ಕೂಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಅವರೀಗ ಸಂಪೂರ್ಣ ಟೂರ್ನಿಯಿಂದಲೇ ಹೊರಗುಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
'ಈ ಹಿಂದಿನ ಯೋಜನೆಗಳ ಪ್ರಕಾರ ಹರ್ಭಜನ್ ಸಿಂಗ್ ಅವರು ಮಂಗಳವಾರ ತಂಡವನ್ನು ಕೂಡಿಕೊಳ್ಳಬೇಕಾಗಿದೆ. ಆದರೆ ಚೆನ್ನೈ ಸೂಪರ್ಕಿಂಗ್ಸ್ ತಂಡದ ಹಾಲಿ ಪರಿಸ್ಥಿತಿಯಿಂದಾಗಿ ಅವರು ಮರುಚಿಂತನೆ ನಡೆಸುತ್ತಿದ್ದಾರೆ. ಅಲ್ಲದೆ ಈ ಬಾರಿ ಟೂರ್ನಿಯ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರು ಈ ವರ್ಷದ ಟೂರ್ನಿಯನ್ನೇ ತ್ಯಜಿಸಬಹುದು' ಎಂದು ಹರ್ಭಜನ್ ಸಿಂಗ್ ಅವರ ಆಪ್ತ ಮೂಲಗಳು ತಿಳಿಸಿವೆ.
ಸಿಎಸ್ಕೆ ತಂಡದ ಕರೊನಾ ಪ್ರಕರಣಗಳಿಂದಾಗಿ ಈಗಾಗಲೆ ತಂಡದ ವಿದೇಶಿ ಆಟಗಾರರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಸಲ್ವುಡ್ ಕೂಡ ಚೆನ್ನೈ ತಂಡವನ್ನು ಕೂಡಿಕೊಳ್ಳುವ ಬಗ್ಗೆ ಹಿಂದೇಟು ಹಾಕಿದ್ದು, ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಅವರು ಏಕದಿನ, ಟಿ20 ಸರಣಿಯ ಬಗ್ಗೆ ಮಾತ್ರ ಗಮನಹರಿಸಿದ್ದಾರೆ. ಐಪಿಎಲ್ ಹತ್ತಿರ ಬಂದಾಗ, ಆಡುವುದೇ-ಬೇಡವೇ ಎಂದು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಸಿಎಸ್ಕೆ ತಂಡದ ಆಟಗಾರರಾದ ದೀಪಕ್ ಚಹರ್ ಮತ್ತು ಋತುರಾಜ್ ಗಾಯಕ್ವಾಡ್ ಸಹಿತ ತಂಡದ ಒಟ್ಟು 13 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ತಂಡದ ಕ್ವಾರಂಟೈನ್ ಅವಧಿಯೂ ಮತ್ತೆ 7 ದಿನಗಳಿಗೆ ವಿಸ್ತರಿಸಿದೆ. ಇದರಿಂದಾಗಿ, ಟೂರ್ನಿಯ ಇತರೆಲ್ಲ ತಂಡಗಳು ಈಗಾಗಲೆ ಅಭ್ಯಾಸ ಆರಂಭಿಸಿದ್ದರೂ, ಸಿಎಸ್ಕೆ ತಂಡ ಮಾತ್ರ ಇನ್ನೂ ಕ್ವಾರಂಟೈನ್ನಲ್ಲೇ ಇದೆ.