

ಬೆಂಗಳೂರು: ಒಲಿಂಪಿಕ್ಸ್ ಪದಕ ಅಮೂಲ್ಯವಾದುದು. ಅದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಆದರೆ ಭಾರತದ ಒಲಿಂಪಿಕ್ಸ್ ಪದಕ ವಿಜೇತರು ಎಷ್ಟು ಮೊತ್ತದ ಬಹುಮಾನ ಪಡೆಯಲಿದ್ದಾರೆ ಎಂಬುದು ಅವರು ಯಾವ ರಾಜ್ಯದಲ್ಲಿ ಹುಟ್ಟಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ಭಾರತದ ಕ್ರೀಡಾಪಟುಗಳಿಗೆ ಅವರ ತವರು ರಾಜ್ಯದ ಸರ್ಕಾರಗಳು ವಿವಿಧ ಮೊತ್ತದ ಬಹುಮಾನಗಳನ್ನು ಘೋಷಿಸಿವೆ. ಅದರಂತೆ ಹರಿಯಾಣ, ಉತ್ತರ ಪ್ರದೇಶ, ಒಡಿಶಾದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ ಗರಿಷ್ಠ 6 ಕೋಟಿ ರೂ. ಬಹುಮಾನ ಪಡೆಯಲಿದ್ದರೆ, ಪಶ್ಚಿಮ ಬಂಗಾಳದ ಕ್ರೀಡಾಪಟುಗಳು ಕನಿಷ್ಠ 25 ಲಕ್ಷ ರೂ. ಗಳಿಸಲಿದ್ದಾರೆ. ಹೀಗಾಗಿ ಹರಿಯಾಣದ ಕುಸ್ತಿಪಟು ಭಜರಂಗ್ ಪೂನಿಯಾ ಚಿನ್ನ ಗೆದ್ದರೆ ಪಡೆಯುವ ಬಹುಮಾನಕ್ಕೂ, ಪಶ್ಚಿಮ ಬಂಗಾಳದ ಬಿಲ್ಗಾರ ಅತನು ದಾಸ್ ಚಿನ್ನ ಗೆದ್ದರೆ ಪಡೆಯಲಿರುವ ಬಹುಮಾನಕ್ಕೂ ಸಾಕಷ್ಟು ವ್ಯತ್ಯಾಸ ಇರಲಿದೆ. ಇನ್ನು ಕೆಲ ರಾಜ್ಯದ ಕ್ರೀಡಾಪಟು ಚಿನ್ನ ಗೆದ್ದರೆ ಪಡೆಯಲಿರುವ ಬಹುಮಾನ, ಇನ್ನೊಂದು ರಾಜ್ಯದ ಕಂಚು ಗೆದ್ದ ಕ್ರೀಡಾಪಟು ಪಡೆಯಲಿರುವ ಬಹುಮಾನ ಮೊತ್ತಕ್ಕಿಂತ ಕಡಿಮೆಯಾಗಿರಲಿದೆ!
ಆಯಾ ಕ್ರೀಡಾಪಟುಗಳಿಗೆ ಅವರ ತವರು ರಾಜ್ಯ ನೀಡುವ ಬಹುಮಾನದ ಜತೆಗೆ ಪ್ರತಿಯೊಬ್ಬ ಪದಕ ವಿಜೇತರಿಗೂ ಕೇಂದ್ರ ಸರ್ಕಾರದಿಂದ ಚಿನ್ನಕ್ಕೆ 75 ಲಕ್ಷ ರೂಪಾಯಿ, ಬೆಳ್ಳಿಗೆ 50 ಲಕ್ಷ ರೂ. ಮತ್ತು ಕಂಚಿಗೆ 30 ಲಕ್ಷ ರೂ. ಬಹುಮಾನ ಸಿಗಲಿದೆ. ಟೋಕಿಯೊ ಒಲಿಂಪಿಕ್ಸ್‌ಗೆ ಗರಿಷ್ಠ 31 ಕ್ರೀಡಾಪಟುಗಳನ್ನು ಕಳುಹಿಸುತ್ತಿರುವ ಹರಿಯಾಣ ದೊಡ್ಡ ಮೊತ್ತದ ಬಹುಮಾನದ ೋಷಣೆಯೊಂದಿಗೆ ಕ್ರೀಡಾಪಟುಗಳನ್ನು ಹುರಿದುಂಬಿಸುತ್ತಿರುವುದಕ್ಕೆ ಪ್ರಶಂಸೆಗಳು ವ್ಯಕ್ತವಾಗುತ್ತಿರುವಂತೆಯೇ, 3 ಕ್ರೀಡಾಪಟುಗಳನ್ನು ಕಳುಹಿಸುತ್ತಿರುವ ಪಶ್ಚಿಮ ಬಂಗಾಳದ ಸಣ್ಣ ಪ್ರಮಾಣದ ಬಹುಮಾನ ಘೋಷಣೆಗೂ ಟೀಕೆಗಳು ವ್ಯಕ್ತವಾಗಿವೆ. ಒಲಿಂಪಿಕ್ಸ್‌ಗೆ ಯಾವುದೇ ಕ್ರೀಡಾಪಟುಗಳನ್ನು ಕಳುಹಿಸದಿರುವ ಜಮ್ಮು-ಕಾಶ್ಮೀರವೇ 50 ಲಕ್ಷ ರೂ. ಬಹುಮಾನ ಘೋಷಣೆ ಮಾಡಿರುವಾಗ, ಬಂಗಾಳದ ನಡೆ ನಿರಾಸೆ ಮೂಡಿಸಿದೆ.
ಕ್ರೀಡಾಪಟುಗಳ ಸಾಧನೆಗೆ ಬಹುಮಾನವೇ ಮಾನದಂಡ ಅಲ್ಲದಿದ್ದರೂ, ವಿಶ್ವದ ಬಲಿಷ್ಠರು ಕಣದಲ್ಲಿರುವ ಒಲಿಂಪಿಕ್ಸ್ ಅಂಗಳದಲ್ಲಿ ಭಾರತದ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಲು ಈ ಬಹುಮಾನ ಮೊತ್ತ ನೆರವಾಗಲಿದೆ. ಅಲ್ಲದೆ, ಕ್ರೀಡೆಯಲ್ಲೇ ಭವಿಷ್ಯ ರೂಪಿಸಬಹುದು ಎಂಬ ಭರವಸೆ ಮೂಡಿಸುತ್ತದೆ ಮತ್ತು ಭವಿಷ್ಯದಲ್ಲಿ ಇನ್ನಷ್ಟು ಕ್ರೀಡಾಪಟುಗಳು ಬೆಳಕಿಗೆ ಬರಲು ಇದು ನೆರವಾಗುತ್ತದೆ. ಇನ್ನು ಒಲಿಂಪಿಕ್ಸ್ ಪದಕ ವಿಜೇತರಿಗೆ ಎಂದಿನಂತೆ ಕೆಲ ಖಾಸಗಿ ಕಂಪನಿಗಳಿಂದಲೂ ಬಹುಮಾನ ಮೊತ್ತ ಹರಿದುಬರುವ ನಿರೀಕ್ಷೆ ಇದ್ದು, ಒಟ್ಟಾರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಕ್ರೀಡಾಪಟುವಿನ ಬದುಕು ಹಸನಾಗುವುದು ಖಚಿತ.
*ಹರಿಯಾಣ: ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 6 ಕೋಟಿ ರೂ, ಬೆಳ್ಳಿ ಗೆದ್ದವರಿಗೆ 4 ಕೋಟಿ ರೂ. ಮತ್ತು ಕಂಚು ಗೆದ್ದವರಿಗೆ 1.5 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಜತೆಗೆ ಎಲ್ಲ ಪದಕ ವಿಜೇತರಿಗೆ ಹರಿಯಾಣ ಸಾರ್ವಜನಿಕ ಸೇವೆ ಅಥವಾ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.
*ಪಂಜಾಬ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ 2ನೇ ಗರಿಷ್ಠ 19 ಕ್ರೀಡಾಪಟುಗಳನ್ನು ಕಣಕ್ಕಿಳಿಸುತ್ತಿರುವ ರಾಜ್ಯ ಪಂಜಾಬ್, ಚಿನ್ನ ಗೆದ್ದವರಿಗೆ 2.25 ಕೋಟಿ ರೂ. ಬೆಳ್ಳಿ ಗೆದ್ದವರಿಗೆ 1.5 ಕೋಟಿ ರೂ ಮತ್ತು ಕಂಚು ಗೆದ್ದವರಿಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ಜತೆಗೆ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಲಿದೆ.
*ರಾಜಸ್ಥಾನ: ಚಿನ್ನ ಗೆದ್ದವರಿಗೆ 3 ಕೋಟಿ ರೂ. ಬೆಳ್ಳಿ ಗೆದ್ದವರಿಗೆ 2 ಕೋಟಿ ರೂ. ಮತ್ತು ಕಂಚು ಗೆದ್ದವರಿಗೆ 1 ಕೋಟಿ ರೂ. ನೀಡುವುದಾಗಿ ರಾಜಸ್ಥಾನ ಸರ್ಕಾರ ಇತ್ತೀಚೆಗೆ ಬಹುಮಾನ ಮೊತ್ತವನ್ನು ಹೆಚ್ಚಿಸಿದೆ.
*ಕರ್ನಾಟಕ: 2018ರಲ್ಲಿ ಜಾರಿಗೆ ಬಂದಿರುವ ರಾಜ್ಯ ಕ್ರೀಡಾನೀತಿಯ ಅನ್ವಯ ಕರ್ನಾಟಕ ಸರ್ಕಾರ, ಚಿನ್ನ ಗೆದ್ದವರಿಗೆ 5 ಕೋಟಿ ರೂ. ಬೆಳ್ಳಿ ಗೆದ್ದವರಿಗೆ 3 ಕೋಟಿ ರೂ. ಮತ್ತು ಕಂಚು ಗೆದ್ದವರಿಗೆ 2 ಕೋಟಿ ರೂ. ಬಹುಮಾನ ನೀಡಲಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಇದನ್ನು ಪುನರುಚ್ಛರಿಸಿದ್ದರು.
*ಉತ್ತರ ಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಲಿಂಪಿಕ್ಸ್ ಚಿನ್ನ ಗೆದ್ದವರಿಗೆ 6 ಕೋಟಿ ರೂ. ಬೆಳ್ಳಿ ಗೆದ್ದವರಿಗೆ 4 ಕೋಟಿ ರೂ. ಮತ್ತು ಕಂಚು ಗೆದ್ದವರಿಗೆ 2 ಕೋಟಿ ರೂ. ನೀಡುವುದಾಗಿ ಕಳೆದ ವರ್ಷ ಘೋಷಿಸಿದ್ದರು. ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಕ್ರೀಡಾಪಟುವಿಗೆ 3 ಕೋಟಿ ರೂ. ಬಹುಮಾನ ಸಿಗಲಿದೆ.
*ಮಣಿಪುರ: ಚಿನ್ನ ಗೆದ್ದವರಿಗೆ 1.2 ಕೋಟಿ ರೂ. ಬೆಳ್ಳಿ ಗೆದ್ದವರಿಗೆ 1 ಕೋಟಿ ರೂ. ಮತ್ತು ಕಂಚು ಗೆದ್ದವರಿಗೆ 76 ಲಕ್ಷ ರೂ. ಬಹುಮಾನ ನೀಡುವುದಾಗಿ ಮಣಿಪುರ ಸರ್ಕಾರ ಹೇಳಿದೆ.
*ತಮಿಳುನಾಡು: ಟೋಕಿಯೊಗೆ 3ನೇ ಗರಿಷ್ಠ 11 ಕ್ರೀಡಾಪಟುಗಳನ್ನು ಕಳುಹಿಸಿರುವ ತಮಿಳುನಾಡು ಚಿನ್ನ ಗೆದ್ದವರಿಗೆ 3 ಕೋಟಿ ರೂ, ಬೆಳ್ಳಿ ಗೆದ್ದರೆ 2 ಕೋಟಿ ರೂ. ಮತ್ತು ಕಂಚು ಗೆದ್ದರೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ.
*ಗುಜರಾತ್: 121 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನು ಕಳುಹಿಸುತ್ತಿರುವ ಗುಜರಾತ್ ರಾಜ್ಯ, ಚಿನ್ನ ಗೆದ್ದವರಿಗೆ 5 ಕೋಟಿ ರೂ, ಬೆಳ್ಳಿ ಗೆದ್ದವರಿಗೆ 3 ಕೋಟಿ ರೂ. ಮತ್ತು ಕಂಚು ಗೆದ್ದವರಿಗೆ 2 ಕೋಟಿ ರೂ. ಬಹುಮಾನ ನೀಡಲಿದೆ.
*ಜಾರ್ಖಂಡ್: ಚಿನ್ನ ಗೆದ್ದರೆ 2 ಕೋಟಿ ರೂ., ಬೆಳ್ಳಿ ಗೆದ್ದರೆ 1 ಕೋಟಿ ರೂ. ಮತ್ತು ಕಂಚು ಗೆದ್ದರೆ 75 ಲಕ್ಷ ರೂ. ನೀಡುವುದಾಗಿ ಜಾರ್ಖಂಡ್ ಸರ್ಕಾರ ಹೇಳಿದೆ.
*ಒಡಿಶಾ: ಚಿನ್ನ ಗೆದ್ದರೆ 6 ಕೋಟಿ ರೂ, ಬೆಳ್ಳಿ ಗೆದ್ದರೆ 4 ಕೋಟಿ ರೂ, ಮತ್ತು ಕಂಚು ಗೆದ್ದರೆ 2.5 ಕೋಟಿ ರೂ. ನೀಡುವುದಾಗಿ ಒಡಿಶಾ ಸರ್ಕಾರ ಪ್ರಕಟಿಸಿದೆ.
*ಪಶ್ಚಿಮ ಬಂಗಾಳ: ಚಿನ್ನ ಗೆದ್ದರೆ 25 ಲಕ್ಷ ರೂ, ಬೆಳ್ಳಿ ಗೆದ್ದರೆ 15 ಲಕ್ಷ ರೂ. ಮತ್ತು ಕಂಚು ಗೆದ್ದರೆ 10 ಲಕ್ಷ ರೂ. ನೀಡುವುದಾಗಿ ಪಶ್ಚಿಮ ಬಂಗಾಳ ಸರ್ಕಾರದ 2018ರ ಘೋಷಣೆ ತಿಳಿಸಿದ್ದು, ಈ ಬಾರಿ ಯಾರಾದರೂ ಪದಕ ಗೆದ್ದರೆ ಈ ಮೊತ್ತ ಏರಿಕೆಯಾಗುವ ನಿರೀಕ್ಷೆಯೂ ಇದೆ.
*ದೆಹಲಿ: ಚಿನ್ನ ಗೆದ್ದರೆ 3 ಕೋಟಿ ರೂ, ಬೆಳ್ಳಿ ಗೆದ್ದರೆ 2 ಕೋಟಿ ರೂ. ಮತ್ತು ಕಂಚು ಗೆದ್ದರೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ದೆಹಲಿ ಸರ್ಕಾರ ತಿಳಿಸಿದೆ.
*ಮಹಾರಾಷ್ಟ್ರ: ಚಿನ್ನ ಗೆದ್ದರೆ 1 ಕೋಟಿ ರೂ, ಬೆಳ್ಳಿ ಗೆದ್ದರೆ 75 ಲಕ್ಷ ರೂ. ಮತ್ತು ಕಂಚು ಗೆದ್ದರೆ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
*ತೆಲಂಗಾಣ: ಚಿನ್ನ ಗೆದ್ದರೆ 2 ಕೋಟಿ ರೂ, ಬೆಳ್ಳಿ ಗೆದ್ದರೆ 1 ಕೋಟಿ ರೂ. ಮತ್ತು ಕಂಚು ಗೆದ್ದರೆ 50 ಲಕ್ಷ ರೂ. ನೀಡುವುದಾಗಿ ತೆಲಂಗಾಣ ಸರ್ಕಾರ ತಿಳಿಸಿದೆ.
*ವಿವಿಧ ರಾಜ್ಯಗಳಲ್ಲಿ ಒಲಿಂಪಿಕ್ಸ್ ಚಿನ್ನಕ್ಕೆ ಬಹುಮಾನ
(ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚಿಗೆ)
ಹರಿಯಾಣ: 6, 4, 1.5 ಕೋಟಿ ರೂ.
ಉತ್ತರ ಪ್ರದೇಶ: 6, 4, 2 ಕೋಟಿ ರೂ.
ಒಡಿಶಾ: 6, 4, 2.5 ಕೋಟಿ ರೂ.
ಕರ್ನಾಟಕ: 5, 3, 2 ಕೋಟಿ ರೂ.
ಗುಜರಾತ್: 5, 3, 2 ಕೋಟಿ ರೂ.
ರಾಜಸ್ಥಾನ: 3, 2, 1 ಕೋಟಿ ರೂ.
ದೆಹಲಿ: 3, 2, 1 ಕೋಟಿ ರೂ.
ತಮಿಳುನಾಡು: 3, 2, 1 ಕೋಟಿ ರೂ.
ಪಂಜಾಬ್: 2.25, 1.5, 1 ಕೋಟಿ ರೂ.
ಮಣಿಪುರ: 1.2, 1 ಕೋಟಿ ರೂ, 76 ಲಕ್ಷ ರೂ.
ಜಾರ್ಖಂಡ್: 2, 1 ಕೋಟಿ ರೂ, 75 ಲಕ್ಷ ರೂ.
ಪಶ್ಚಿಮ ಬಂಗಾಳ: 25, 15, 10 ಲಕ್ಷ ರೂ.
ಮಹಾರಾಷ್ಟ್ರ: 1 ಕೋಟಿ ರೂ, 75, 50 ಲಕ್ಷ ರೂ.
ತೆಲಂಗಾಣ: 2, 1 ಕೋಟಿ ರೂ, 50 ಲಕ್ಷ ರೂ.
ಅಮೆರಿಕ, ರಷ್ಯಾಕ್ಕಿಂತ ಭಾರತದಲ್ಲೇ ಅಧಿಕ ಬಹುಮಾನ!
ಭಾರತದಲ್ಲಿ ಕ್ರೀಡೆಗೆ ಪ್ರೋತ್ಸಾಹ ಕಡಿಮೆ ಎಂಬ ಮಾತಿನ ನಡುವೆ, ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ ಕ್ರೀಡಾಪಟುವಿಗೆ ಸಿಗುವ ಬಹುಮಾನ ಅಮೆರಿಕ, ರಷ್ಯಾ, ಇಟಲಿ, ಜರ್ಮನಿಯಂಥ ದೇಶಗಳ ಕ್ರೀಡಾಪಟು ಪಡೆಯುವ ಬಹುಮಾನ ಮೊತ್ತಕ್ಕಿಂತ ಅಧಿಕ ಎಂಬುದು ಗಮನಾರ್ಹ. ಭಾರತದಲ್ಲಿ ಚಿನ್ನ ಗೆದ್ದ ಕ್ರೀಡಾಪಟು ಗರಿಷ್ಠ 8 ಲಕ್ಷ ಡಾಲರ್ (6 ಕೋಟಿ ರೂ.) ಪಡೆಯಲಿದ್ದಾರೆ. ಅದೇ ಅಮೆರಿಕದ ಕ್ರೀಡಾಪಟು ಚಿನ್ನ ಗೆದ್ದರೆ ಕೇವಲ 37,500 ಡಾಲರ್ (28 ಲಕ್ಷ ರೂ) ಗಳಿಸಲಿದ್ದಾರೆ. ರಷ್ಯಾ ಚಿನ್ನ ಗೆದ್ದ ಕ್ರೀಡಾಪಟುವಿಗೆ 61 ಸಾವಿರ ಡಾಲರ್ (48 ಲಕ್ಷ ರೂ) ನೀಡಲಿದೆ. ಇಟಲಿ ಚಿನ್ನ ಗೆದ್ದವರಿಗೆ 1.66 ಲಕ್ಷ ಡಾಲರ್ (1.25 ಕೋಟಿ ರೂ) ನೀಡಲಿದೆ. ಜರ್ಮನಿ 25 ಸಾವಿರ ಡಾಲರ್ (18.73 ಲಕ್ಷ ರೂ.), ಕೆನಡ 20 ಸಾವಿರ ಡಾಲರ್ (15 ಲಕ್ಷ ರೂ.) ನೀಡಲಿದೆ.