ಬಂಗಾಳ ಕ್ರಿಕೆಟ್ ತಂಡದಲ್ಲಿ ಕ್ರೀಡಾ ಸಚಿವ ಮನೋಜ್ ತಿವಾರಿಗೆ ಸ್ಥಾನ

tiwaru web
Published on

ಕೋಲ್ಕತ: ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಹಾಗೂ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಮುಂಬರುವ ದೇಶೀಯ ಕ್ರಿಕೆಟ್ ಋತುವಿಗೆ ಪೂರ್ವಭಾವಿಯಾಗಿ ಬಂಗಾಳ ಕ್ರಿಕೆಟ್ ಸಂಸ್ಥೆ ಹೆಸರಿಸಿರುವ ರಾಜ್ಯದ 39 ಸಂಭಾವ್ಯ ಆಟಗಾರರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದರಿಂದ ರಾಜ್ಯದ ಕ್ರೀಡಾ ಅಭಿವೃದ್ಧಿ ಕೆಲಸಗಳ ಜತೆಗೆ ಅವರು ಕ್ರಿಕೆಟ್ ರಂಗದಲ್ಲೂ ಮುಂದುವರಿಯುವತ್ತ ಒಲವು ತೋರಿದ್ದಾರೆ.

ಮನೋಜ್ ತಿವಾರಿ ಇತ್ತೀಚೆಗೆ ಅಸೆಂಬ್ಲಿ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನವೂ ಒಲಿದಿತ್ತು. 2020ರ ಮಾರ್ಚ್‌ನಲ್ಲಿ ರಣಜಿ ಟ್ರೋಫಿ ಫೈನಲ್‌ನಲ್ಲಿ ಅವರು ಕೊನೆಯದಾಗಿ ಆಡಿದ್ದರು. ಬಂಗಾಳ ರಣಜಿ ತಂಡದ ಮಾಜಿ ನಾಯಕರೂ ಆಗಿರುವ 35 ವರ್ಷದ ಮನೋಜ್ ತಿವಾರಿ ಭಾರತ ಪರ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನೂ ಆಡಿದ್ದಾರೆ.

‘ನಾನು ಈಗಲೂ ಫಿಟ್ನೆಸ್ ಕಾಯ್ದುಕೊಳ್ಳುತ್ತಿರುವೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ. ಆದರೆ ಬಂಗಾಳ ಪರ ಮತ್ತಷ್ಟು ಪಂದ್ಯಗಳನ್ನು ಆಡುವ ಸಾಧ್ಯತೆಯನ್ನು ತಳ್ಳಿ ಹಾಕಲಾರೆ’ ಎಂದು ಮನೋಜ್ ತಿವಾರಿ ಹೇಳಿದ್ದಾರೆ. ಅವರು ಶಿವಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರು ಬಂಗಾಳ ತಂಡದ ಜತೆಗೆ ಜುಲೈ 23ರಿಂದ ಫಿಟ್ನೆಸ್ ಶಿಬಿರದಲ್ಲೂ ಪಾಲ್ಗೊಳ್ಳಲಿದ್ದಾರೆ.

ಕಳೆದ 6 ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಬಂಗಾಳದ ಮಾಜಿ ಕ್ರಿಕೆಟಿಗ ಲಕ್ಷ್ಮಿ ರತನ್ ಶುಕ್ಲಾ ಕೂಡ ಈ ಬಾರಿ ಕ್ರಿಕೆಟ್‌ಗೆ ಮರಳುತ್ತಿದ್ದು, ಬಂಗಾಳದ 23 ವಯೋಮಿತಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net