

ಬೆಂಗಳೂರು: ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ಹಾಸಿಗೆಗಳನ್ನು ನೀಡದೆ ರೋಗಿಗಳನ್ನು ಅಲೆದಾಡಿಸಿದರೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಿಮಿನಲ್ ಕೇಸ್ ದಾಖಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.
ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಖಾಸಗಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಗಳ ಮುಖ್ಯಸ್ಥರ ಸಭೆ ಬಳಿಕ ವಿವರ ನೀಡಿದ ಸಚಿವ ಆರ್. ಅಶೋಕ್, ಒಪ್ಪಿದಂತೆ ಬೆಡ್ಗಳನ್ನು ನೀಡಲೇಬೇಕು. ಮತ್ತೊಮ್ಮೆ ಮಾತುಕತೆ, ಸಭೆ ನಡೆಸುವುದಿಲ್ಲ. ರೋಗಿಗಳನ್ನು ದಾಖಲಿಸಿಕೊಳ್ಳದೇ ಬೆಡ್ ಖಾಲಿ ಇಲ್ಲವೆಂಬ ನೆಪ ಹೇಳಿ ಅಲೆದಾಡಿಸುವ ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಸಿಎಂ ಬಿಎಸ್ವೈ ಖಡಕ್ ಸೂಚನೆ ನೀಡಿದ್ದಾರೆ ಎಂದರು.
ಆಕಾಶ್ ಮತ್ತು ಡಾ.ಅಂಬೇಡ್ಕರ್ ಮೆಡಿಕಲ್ ಕಾಲೇಜುಗಳು ತಮ್ಮಲ್ಲಿನ ಎಲ್ಲ ಹಾಸಿಗೆಗಳನ್ನು ನೀಡಲು ಒಪ್ಪಿದ್ದು, ಸಾಮಾನ್ಯ ಹಾಸಿಗೆಗಳಿಗಿಂತ ವೆಂಟಿಲೇಟರ್ಯುುಕ್ತ ಹಾಸಿಗೆಗಳನ್ನು ನೀಡಬೇಕೆಂದು ಖಾಸಗಿ ಕಾಲೇಜುಗಳಿಗೆ ಮನವಿ ಮಾಡಲಾಗಿದೆ ಎಂದು ಅಶೋಕ್ ತಿಳಿಸಿದರು.
ಸ್ಪಂದಿಸಲು ತಾಕೀತು: ಮಾಧ್ಯಮ ವರದಿಗಳಲ್ಲಿ ಬೆಳಕು ಚೆಲ್ಲುವ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಮುಖ್ಯಮಂತ್ರಿಯವರು ತಾಕೀತು ಮಾಡಿದ್ದು, ಇದರಿಂದ ಸಕಾಲಕ್ಕೆ ರೋಗಿಗಳಿಗೆ ನೆರವು ದೊರೆಯಲಿದೆ ಎಂಬ ಸಲಹೆ ನೀಡಿದ್ದಾರೆ ಎಂದರು. ಕೇಂದ್ರ ಸರ್ಕಾರ ಒದಗಿಸಲಿರುವ ವೆಂಟಿಲೇಟರ್ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುವುದು. ಬೆಂಗಳೂರು ದಕ್ಷಿಣ ವಲಯದ ಪ್ರತಿಯೊಂದು ಆಸ್ಪತ್ರೆಗೆ ಒಬ್ಬ ಪೇದೆಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು
ಯಾವ ಅಧಿಕಾರಿ ಎಲ್ಲಿ ಕೆಲಸ ಮಾಡಬೇಕು ಎನ್ನುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು, ಎಲ್ಲರ ಸಹಮತದ ಪ್ರಶ್ನೆ ಉದ್ಭವಿಸುವುದಿಲ್ಲ. ಅಧಿಕಾರಿಗಳಿಗೆ ಯಾವುದೇ ಹುದ್ದೆ ಶಾಶ್ವತವಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸಮಜಾಯಿಷಿ ನೀಡಿದರು. ಬಿಬಿಎಂಪಿ ಆಯುಕ್ತರಾಗಿದ್ದ ಅನಿಲ್ ಕುಮಾರ್ ವರ್ಗಾವಣೆಗೆ ಹೈಕೋರ್ಟ್ ತೀರ್ಪು ಒಂದೇ ಕಾರಣವಲ್ಲ. ಎನ್. ಮಂಜುನಾಥ ಪ್ರಸಾದ್ಗೆ ಹಿಂದೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಅನಿಲ್ ಕುಮಾರ್ ಹಾಗೂ ಮಂಜುನಾಥ ಪ್ರಸಾದ್ ಇಬ್ಬರೂ ಸಮರ್ಥರು ಎಂದು ಸಚಿವರು ಸ್ಪಷ್ಟಪಡಿಸಿದರು.
ಬೆಂಗಳೂರು ಲಾಕ್ಡೌನ್ ವಿಚಾರದಲ್ಲಿ ಸಿಎಂ ಈವರೆಗೆ ಏನು ಹೇಳಿದ್ದಾರೋ ಅದೇ ಅಂತಿಮ. ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯುತ್ತಿದ್ದು, ಅದನ್ನು ಆಧರಿಸಿ ಸಿಎಂ ತೀರ್ಮಾನ ಮಾಡುತ್ತಾರೆ. | ಆರ್. ಅಶೋಕ್ ಕಂದಾಯ ಸಚಿವ