ಮಾಜಿ ಕ್ರಿಕೆಟಿಗನ ತಾಯಿ ತಮ್ಮ ಫ್ಲಾಟ್​ನಲ್ಲೇ ಶವವಾಗಿ ಪತ್ತೆ; ಮುಂದುವರಿದ ತನಿಖೆ | Crime

Untitled-design-2024-10-05T163649.163-1
Published on

ಮುಂಬೈ: ಉತ್ತರ ಕನ್ನಡ ಮೂಲದ ಮಾಜಿ ಕ್ರಿಕೆಟಿಗ ಮತ್ತು ನಟ ಸಲೀಲ್ ಅಂಕೋಲಾ ಅವರ ತಾಯಿ ಮಾಲಾ ಅಶೋಕ್ ಅಂಕೋಲಾ(77) ಅವರು ಪುಣೆಯ ತಮ್ಮ ಫ್ಲಾಟ್‌ನಲ್ಲಿ ಗಂಟಲು ಸೀಳಿದ ಸ್ಥಿತಿಯಲ್ಲಿ ಶುಕ್ರವಾರ (ಅಕ್ಟೋಬರ್​​ 4) ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಮನೆಕೆಲಸದಾಕೆ ಮನೆಗೆ ಬಂದು ಬಾಗಿಲಿನ ಬೆಲ್‌ ಮಾಡಿದರೂ ಯಾವ ಪ್ರತಿಕ್ರಿಯೆ ಬಾರದಿದ್ದಾಗ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾಗಿ ಹೇಳಿದ್ದಾರೆ. (Crime)

ಪೊಲೀಸ್​​ ವರದಿ ಪ್ರಕಾರ, ಮಾಲಾ ಅಶೋಕ್​ ಅಂಕೋಲಾ ಅವರ ದೇಹದ ಬಳಿ ಚಾಕು ಮತ್ತು ಸ್ಕ್ರೂಡ್ರೈವರ್ ಪತ್ತೆಯಾಗಿದೆ. ಮನೆಯಲ್ಲಿ ಯಾರಾದರೂ ಒತ್ತಾಯಪೂರ್ವಕವಾಗಿ ಪ್ರವೇಶವಾಗಿರುವ ಅಥವಾ ದರೋಡೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೆ ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎನ್ನಲಾಗಿದೆ.

ಕಟ್ಟಡದ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸಿರಲಿಲ್ಲ. ಬೆಳಗ್ಗೆ 10.45ರಿಂದ 11.45ರವರೆಗೆ ಯಾವುದೇ ಅಪರಿಚಿತ ವ್ಯಕ್ತಿ ಕಟ್ಟಡದೊಳಗೆ ಪ್ರವೇಶಿಸಿಲ್ಲ ಎಂದು ಸೆಕ್ಯೂರಿಟಿ ಅವರು ಹೇಳಿದ್ದಾರೆ. ಬೆಳಗ್ಗೆ ಹಾಲು, ಹೂವುಗಳು ಮತ್ತು ತರಕಾರಿಗಳನ್ನು ವಿತರಿಸಿದವರು ಮಾಲಾ ಅವರನ್ನು ಕೊನೆಯದಾಗಿ ನೋಡಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಫ್ಲಾಟ್​​​ ಬಾಗಿಲು ತೆರೆದಾಗ ಮಹಿಳೆ ಕತ್ತು ಸೀಳಿ ಮೃತಪಟ್ಟಿರುವುದು ಕಂಡುಬಂದಿದೆ. ಮೇಲ್ನೋಟಕ್ಕೆ ಅದು ಸ್ವಯಂ ಪ್ರೇರಿತ ಗಾಯ ಎಂದು ತೋರುತ್ತದೆ. ಆದರೆ ನಾವು ಎಲ್ಲಾ ಕೋನಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ.'' ಪ್ರಕರಣದ ನೈಜ ಚಿತ್ರಣಕ್ಕಾಗಿ ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗಿದೆ. ಮಾಲಾ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬುದು ತಿಳಿದು ಬಂದಿದೆ ಎಂದು ಡೆಪ್ಯುಟಿ ಕಮಿಷನರ್‌ ಆಫ್‌ ಪೊಲೀಸ್‌ ಸಂದೀಪ್ ಸಿಂಗ್ ಗಿಲ್ ಹೇಳಿದ್ದಾರೆ.

ಕ್ರಿಕೆಟ್​ನಲ್ಲಿ ಮಾತ್ರವಲ್ಲದೆ ಸಲೀಲ್​​ ಸಿರಿಯಲ್​ಗಳಲ್ಲೂ ನಟಿಸಿದ್ದಾರೆ. ಸಲೀಲ್‌ ಅಂಕೋಲಾ ಪ್ರಣೀತಾ ಬ್ಯಾನರ್ಜಿಯನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು. ವಿಪರೀತ ಕುಡಿತದ ಚಟದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಸಲೀಲ್‌ ಅವರನ್ನು ಪುಣೆಯ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇದರ ಪರಿಣಾಮ ದಂಪತಿ 2011ರಲ್ಲಿ ವಿಚ್ಛೇದನ ಪಡೆದರು.

ಸಲೀಲ್ ಅಂಕೋಲಾ ಯಾರು?:

ಸಲೀಲ್ ಅಂಕೋಲಾ ಅವರು ಮಹಾರಾಷ್ಟ್ರದೊಂದಿಗೆ ತಮ್ಮ ಕ್ರಿಕೆಟ್ ಜೀವನವನ್ನು ಪ್ರಾರಂಭಿಸಿದರು. 1989 ನವೆಂಬರ್​ 15ರಂದು ಅವರು ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದರು. ನಂತರ ಏಕ ದಿನ ಪಂದ್ಯದಲ್ಲೂ ಆಡಿದ್ದರು. ಅವರು 1996ರ ವಿಶ್ವಕಪ್‌ನಲ್ಲಿ ಭಾರತ ತಂಡದ ಭಾಗವಾಗಿದ್ದರು. ಆದರೆ ಅವರ ವೃತ್ತಿಜೀವನವು 1997ರಲ್ಲಿ ಕೊನೆಗೊಂಡಿತು. ಅವರು 29ನೇ ವಯಸ್ಸಿನಲ್ಲಿ ಅವರ ಮೊಣಕಾಲಿನಲ್ಲಿ ಗಡ್ಡೆಯ ಕಾರಣದಿಂದಾಗಿ ನಿವೃತ್ತರಾಗಬೇಕಾಯಿತು. ವೇಗದ ಬೌಲರ್ ಒಂದು ಟೆಸ್ಟ್‌ನಲ್ಲಿ ಎರಡು ಮತ್ತು 20 ODIಗಳಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net